ಜರ್ಮನಿ ಮಿಲಿಟರಿ ಅಧಿಕಾರಿ ಹೆಸರಲ್ಲಿ ಉಡುಪಿಯ ಮಹಿಳೆಗೆ ಲಕ್ಷಾಂತರ ರೂ. ವಂಚನೆ

ಹೊಸದಿಗಂತ ವರದಿ, ಮಂಗಳೂರು:

ಸಾಮಾಜಿಕ ಜಾಲತಾಣವೊಂದರಲ್ಲಿ ತಾನು ಜರ್ಮನಿಯ ಮಿಲಿಟರಿ ಅಧಿಕಾರಿ ಎಂದು ಪರಿಚಯಿಸಿಕೊಂಡ ಆಗಂತುಕನೋರ್ವ ಉಡುಪಿ ಜಿಲ್ಲೆಯ ಹೆಬ್ರಿಯ ನಿವಾಸಿ ಮಹಿಳೆಯೋರ್ವರಿಗೆ ಲಕ್ಷಾಂತರ ರೂ. ವಂಚನೆ ಮಾಡಿರುವ ಘಟನೆ ನಡೆದಿದ್ದು, ಈ ಬಗ್ಗೆ ಉಡುಪಿ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ?
ಮಿಹಿಯಾಲ್ ನೀಲ್ಗೆನ್ ಎಂಬ ಹೆಸರಿನಲ್ಲಿ ಆಗಂತುಕನೋರ್ವ ಫೇಸ್ ಬುಕ್ ಮೂಲಕ ಹೆಬ್ರಿಯ ಮಹಿಳೆಗೆ ಪರಿಚಯವಾಗಿದ್ದ. ಈತ ತನ್ನನ್ನು ತಾನು ಜರ್ಮನಿಯಲ್ಲಿ ಮಿಲಿಟರಿ ಅಧಿಕಾರಿ ಎಂಬುದಾಗಿ ಪರಿಚಯಿಸಿಕೊಂಡು ಬಳಿಕ ವಾಟ್ಸಾಪ್‌ನಲ್ಲಿ ಚಾಟಿಂಗ್ ಮಾಡುತ್ತಾ ಸ್ನೇಹಿತನಾಗಿದ್ದ. ಚಾಟಿಂಗ್ ವೇಳೆ ಮಹಿಳೆಗೆ ಉಡುಗೊರೆ ಕಳುಹಿಸುವುದಾಗಿ ಕೂಡಾ ಆತ ಹೇಳಿದ್ದಾನೆ. ಈ ನಡುವೆ ದೆಹಲಿಯ ಪಾರ್ಸೆಲ್ ಆಫೀಸ್‌ನಿಂದ ಎಂದು ಮಹಿಳೆಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿದ್ದು, ಜರ್ಮನಿಯಿಂದ ಬಂದಿರುವ ಪಾರ್ಸೆಲ್‌ನಲ್ಲಿ ಜ್ಯುವೆಲರಿ, ಯುರೋ ಕರೆನ್ಸಿ ಇದೆ.

ಇದನ್ನು ಪಡೆಯಲು ಪಾರ್ಸೆಲ್ ಚಾರ್ಜ್, ಮನಿ ಲ್ಯಾಂಡಿಂಗ್ ಸರ್ಟಿಫಿಕೇಟ್, ಕಸ್ಟಂ ಸರ್ಟಿಫಿಕೇಟ್ ಹಾಗೂ ಹಣ ಪಾವತಿಸಬೇಕು ಎಂದು ತಿಳಿಸಿದ್ದಾನೆ. ಅದನ್ನು ನಂಬಿದ ಮಹಿಳೆ ಆತ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ರೂಪಾಯಿ 54,74,000 ರೂ. ಹಣ ಪಾವತಿಸಿದ್ದಾರೆ. ಆಗಂತುಕರು ಪಾರ್ಸೆಲನ್ನೂ ಕಳುಹಿಸದೇ, ಹಣವನ್ನು ಮರಳಿಸದೆ ಗಾಯಬ್ ಆಗಿದ್ದಾರೆ.

ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಸೆಕ್ಷನ್ 66(ಸಿ), 66(ಡಿ) ಐ.ಟಿ. ಕಾಯಿದೆ ಮತ್ತು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!