ಹೊಸದಿಗಂತ ವರದಿ,ದಾವಣಗೆರೆ:
ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕ ಉಮಾ ಪ್ರಶಾಂತ್ ಕಾರಿಗೆ ಜಿಲ್ಲಾ ಪೊಲೀಸ್ ಕಚೇರಿ ಗೇಟ್ ಬಳಿಯೇ ಮಾನಸಿಕ ಅಸ್ವಸ್ಥೆ ಮಹಿಳೆಯೊಬ್ಬಳು ಕಲ್ಲು ಎಸೆದ ಘಟನೆ ಮಂಗಳವಾರ ನಡೆದಿದೆ.
ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಎಸ್ಪಿ ಕಚೇರಿ ಗೇಟ್ ಬಳಿ ಹರಿಹರದ ಗಾಂಧಿ ನಗರದ ನಿವಾಸಿ ಎನ್ನಲಾದ ಸರೋಜಾ ದಾಸ್ ಎಂಬ ಮಹಿಳೆ ದೊಡ್ಡ ಕಲ್ಲನ್ನು ಜೋರಾಗಿ ಎಸೆದಿದ್ದರಿಂದ ಕಾರಿನ ಮುಂಭಾಗದ ಗಾಜಿನಲ್ಲಿ ಬಿರುಕು ಬಿಟ್ಟಿದೆ. ಎಂದಿನಂತೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಕರ್ತವ್ಯಕ್ಕೆ ಹಾಜರಾಗಿದ್ದರು. ಕಚೇರಿಗೆ ಬಂದಿದ್ದ ಮಹಿಳೆಯು ಎಸ್ಪಿ ಉಮಾ ಪ್ರಶಾಂತ್ ಇಲ್ಲದೇ ಚಾಲಕ ಕೊಂಡೊಯ್ಯುತ್ತಿದ್ದ ಕಾರಿನ ಮೇಲೆ ಗೇಟ್ ಬಳಿ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ರಭಸವಾಗಿ ಎಸೆದಿದ್ದಾಳೆ. ಕಲ್ಲೇಟಿನಿಂದ ಎಸ್ಪಿ ಅಧಿಕೃತ ವಾಹನದ ಮುಂಭಾಗದ ಗಾಜು ಸೀಳಿದ್ದು, ಕಾರು ಚಾಲಕ ದಿಢೀರ್ ಘಟನೆಯಿಂದ ದಿಗ್ಭ್ರಮೆಗೊಳಗಾಗಿದ್ದಾರೆ.
ಎಸ್ಪಿ ಕಾರಿನಿಂದ ಇಳಿದ ಚಾಲಕ ಈ ಬಗ್ಗೆ ಮಹಿಳೆಯನ್ನು ಪ್ರಶ್ನಿಸಿದ್ದು, ಕಚೇರಿಯ ಇತರೆ ಸಿಬ್ಬಂದಿ ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಮಹಿಳೆಯನ್ನು ಎಸ್ಪಿ ಕಚೇರಿಯೊಳಗೆ ಕರೆದೊಯ್ದ ಪೊಲೀಸರು ವಿಚಾರಿಸಿದಾಗ ಆಕೆ ಮಾನಸಿಕ ಅಸ್ವಸ್ಥೆ ಎಂಬುದು ಗೊತ್ತಾಗಿದೆ. ತಕ್ಷಣ ಮಹಿಳೆಯನ್ನು ಹರಿಹರಕ್ಕೆ ಕರೆದೊಯ್ದು ಬಿಟ್ಟು ಬರಲಾಯಿತು. ಆಕೆಗೆ ಮನೆ, ಸೂರು ಯಾವುದೇ ಇಲ್ಲದ್ದರಿಂದ ಸಾರ್ವಜನಿಕ ಸ್ಥಳಗಳಲ್ಲೇ ಜೀವನ ನಡೆಸುತ್ತಿದ್ದು, ಹರಿಹರದ ಬಸ್ ನಿಲ್ದಾಣದಲ್ಲಿ ತನಗೆ ರಾತ್ರಿ ಮಲಗಲು ಪೊಲೀಸರು ಅವಕಾಶ ನೀಡದ ಕಾರಣ ಎಸ್ಪಿ ಕಾರಿನ ಮೇಲೆ ಕಲ್ಲೆಸೆದು ಸಿಟ್ಟು ತೀರಿಸಿಕೊಂಡಿದ್ದಾಳೆ ಎನ್ನಲಾಗಿದೆ.