ಹೊಸದಿಗಂತ ವರದಿ, ಮಂಡ್ಯ :
ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಠಾಣೆಗೆ ಬಂದ ಯುವಕನೋರ್ವ ಪೊಲೀಸರ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ಪ್ರದರ್ಶಿಸಿರುವ ಘಟನೆ ಪಾಂಡವಪುರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಸಾಗರ್ (30) ಎಂಬಾತನೇ ಪೊಲೀಸರ ಮೇಲೆ ಹಲ್ಲೆ ನಡೆಸಿ ಠಾಣೆಯಲ್ಲೇ ಗೂಂಡಾವರ್ತನೆ ತೋರಿರುವ ಯುವಕ.
ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಸಾಗರ್ ವಿರುದ್ಧ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾಗರ್‌ನನ್ನು ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಪೊಲೀಸ್ ಪೇದೆ ಅಭಿಷೇಕ್ ಎಂಬಾತ ಸಾಗರ್ ಮೇಲೆ ಕೈ ಮಾಡುತ್ತಿದ್ದಂತೆ ಪ್ರತಿದಾಳಿ ನಡೆಸಿ, ಪೇದೆಯ ಕುತ್ತಿಗೆ ಪಟ್ಟಿ ಹಿಡಿದು ಗೂಂಡಾಗಿರಿ ಪ್ರದರ್ಶಿಸಿದ್ದಾನೆ.
ತಡೆಯಲು ಬಂದ ಮತ್ತೋರ್ವ ಪೊಲೀಸ್ ಪೇದೆಯ ಮೇಲೂ ಸಾಗರ್ ಹಲ್ಲೆ ನಡೆಸಿದ್ದ. ಈ ವೇಳೆ ಠಾಣೆಯಲ್ಲಿದ್ದ ಮಹಿಳಾ ಸಿಬ್ಬಂದಿಗಳೂ ಸಹ ಸ್ಥಳಕ್ಕೆ ಬಂದು ಪೇದೆಗಳ ಕತ್ತಿನ ಪಟ್ಟಿ ಹಿಡಿದುಕೊಂಡಿದ್ದ ಸಾಗರ್‌ನನ್ನು ಬಿಡುವಂತೆ ಎಳೆದಾಡಿದರೂ ಬಿಡದೆ ಮಹಿಳಾ ಪೇದೆಯರನ್ನೂ ದೂರಕ್ಕೆ ತಳ್ಳಿದ್ದಾನೆ.
ಬಳಿಕ ಠಾಣೆಯ ಒಳಗಿದ್ದ ಸಬ್ ಇನ್ಸ್‌ಪೆಕ್ಟರ್ ಬಂದು ಹಲ್ಲೆ ನಡೆಸಿದಾಗ ಎಚ್ಚೆತ್ತ ಸಾಗರ್ ಪೊಲೀಸರಿಂದ ಬಿಡಿಸಿಕೊಂಡು ಪರಾರಿಯಾಗಿದ್ದಾನೆ. ನಂತರ ಆತನನ್ನ ಬೆನ್ನಟ್ಟಿದ ಹೋದ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದ್ದಾರೆ.
ಈ ಸಂಬಂಧ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.