ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಾ. ಮನಮೋಹನ್ ಸಿಂಗ್ ಅಂತ್ಯಕ್ರಿಯೆ ವಿಚಾರದಲ್ಲೂ ರಾಜಕೀಯ ಕೆಸರೆರಚಾಟ ಶುರುವಾಗಿದೆ. ಬೋಧ್ ಘಾಟ್‌ನಲ್ಲಿಂದು ಅಂತ್ಯಕ್ರಿಯೆ ನೆರವೇರಿದ ಬಳಿಕ ರಾಹುಲ್ ಗಾಂಧಿ ನಿಗಮ್ ಬೋಧ್ ಘಾಟ್‌ನಲ್ಲಿ ಅಂತ್ಯಕ್ರಿಯೆ ಮಾಡುವ ಮೂಲಕ ಮನಮೋಹನ್ ಸಿಂಗ್ ಅವರಿಗೆ ಬಿಜೆಪಿ ಅವಮಾನ ಮಾಡಿದೆ ಅಂತ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಭಾರತಮಾತೆಯ ಮಹಾನ್ ಪುತ್ರ ಹಾಗೂ ಸಿಖ್ ಸಮುದಾಯದ ಮೊದಲ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರವನ್ನು ನಿಗಮಬೋಧ್ ಘಾಟ್‌ನಲ್ಲಿ ನೆರವೇರಿಸುವ ಮೂಲಕ ಪ್ರಸ್ತುತ ಸರ್ಕಾರ ಅವರಿಗೆ ಸಂಪೂರ್ಣ ಅವಮಾನ ಮಾಡಿದೆ. ಮನಮೋಹನ್ ಸಿಂಗ್ ಒಂದು ದಶಕದ ಕಾಲ ಭಾರತದ ಪ್ರಧಾನಿಯಾಗಿದ್ದರು. ಅವರ ಅಧಿಕಾರಾವಧಿಯಲ್ಲಿ ದೇಶವು ಆರ್ಥಿಕ ಮಹಾಶಕ್ತಿಯಾಯಿತು ಮತ್ತು ಅವರ ನೀತಿಗಳು ಇನ್ನೂ ದೇಶದ ಬಡ ಮತ್ತು ಹಿಂದುಳಿದ ವರ್ಗಗಳಿಗೆ ಬೆಂಬಲ ನೀಡುತ್ತಿವೆ.
ಇಲ್ಲಿಯವರೆಗೆ, ಎಲ್ಲಾ ಮಾಜಿ ಪ್ರಧಾನಿಗಳ ಘನತೆಯನ್ನು ಗೌರವಿಸಿ, ಅವರ ಅಂತಿಮ ವಿಧಿಗಳನ್ನು ಅಧಿಕೃತ ಸಮಾಧಿಗಳಲ್ಲಿ ನಡೆಸಲಾಯಿತು, ಇದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಯಾವುದೇ ಅನಾನುಕೂಲತೆ ಇಲ್ಲದೇ ಗೌರವ ಸಲ್ಲಿಸಬದಾಗಿದೆ. ಹಾಗೆಯೇ ದೇಶದ ಈ ಮಹಾನ್ ಪುತ್ರ ಮತ್ತು ಅವರ ಸಮುದಾಯದ ಬಗ್ಗೆ ಸರ್ಕಾರ ಗೌರವ ತೋರಿಸಬೇಕಿತ್ತು. ಆದ್ರೆ ಸಂಪೂರ್ಣ ಅಪಮಾನ ಮಾಡಿದೆ ಎಂದು ಬರೆದುಕೊಂಡಿದ್ದಾರೆ.
ಏನಿದು ವಿವಾದ?
ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ಅಂತ್ಯ ಸಂಸ್ಕಾರ ನಡೆಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿನ್ನೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಅಲ್ಲದೆ, ಮೋದಿ ಜೊತೆ ದೂರವಾಣಿ ಮಾತುಕತೆಯನ್ನೂ ನಡೆಸಿದ್ದರು. ರಾಷ್ಟ್ರನಾಯಕರು ಮತ್ತು ಮಾಜಿ ಪ್ರಧಾನಿಗಳ ಅಂತ್ಯಕ್ರಿಯೆಯ ಸ್ಥಳದಲ್ಲಿಯೇ ಸ್ಮಾರಕ ನಿರ್ಮಿಸುವ ಸಂಪ್ರದಾಯವಿದೆ. ಅದರಂತೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿಯೇ ಮನಮೋಹನ್ ಸಿಂಗ್ ಅಂತ್ಯ ಸಂಸ್ಕಾರ ನಡೆಯಬೇಕು ಎಂದು ಖರ್ಗೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಒಪ್ಪಿಗೆ ನೀಡಿದೆ.
ಈ ಬಗ್ಗೆ ಸಿಂಗ್ ಕುಟುಂಬ ಮತ್ತು ಎಐಸಿಸಿ ಅಧ್ಯಕ್ಷ ಖರ್ಗೆಗೆ ಕೇಂದ್ರ ಗೃಹಸಚಿವಾಲಯ ಮಾಹಿತಿ ನೀಡಿದೆ. ಆದ್ರೆ ಅಂತ್ಯಸಂಸ್ಕಾರ ನಿಗಮ್ ಬೋಧ್ ಘಾಟ್‌ನಲ್ಲಿ ನೆರವೇರಿದ್ದರಿಂದ ಕೆರಳಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ನಿಗಮ್ ಬೋಧ್ ಘಾಟ್‌ನಲ್ಲಿ ಅಂತ್ಯಕ್ರಿಯೆ ಮಾಡುವ ಮೂಲಕ ಮನಮೋಹನ್ ಸಿಂಗ್ ಅವರಿಗೆ ಬಿಜೆಪಿ ಅವಮಾನ ಮಾಡಿದೆ ಅಂತ ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಕಿಡಿಕಾರಿದ್ದಾರೆ.
ಇದಕ್ಕೆ ಕೌಂಟರ್ ಕೊಟ್ಟಿರುವ ಬಿಜೆಪಿ, ಡಾ. ಸಿಂಗ್‌ರ ಸ್ಮಾರಕ ವಿಚಾರವಾಗಿ ಕಾಂಗ್ರೆಸ್ ರಾಜಕೀಯ ಮಾಡ್ತಿರೋದು ದುಃಖಕರ ಅಂದಿದೆ. ಈ ಮಧ್ಯೆ, ಕಾಂಗ್ರೆಸ್ ವಿರುದ್ಧ ಪ್ರಣಬ್ ಮುಖರ್ಜಿ ಪುತ್ರಿ ಶರ್ಮಿಷ್ಠಾ ಕಿಡಿಕಾರಿದ್ದಾರೆ. ನನ್ನ ತಂದೆ ಸಾವನ್ನಪ್ಪಿದ್ದಾಗ ಕಾಂಗ್ರೆಸ್ ತಲೆಕೆಡಿಸಿಕೊಂಡಿರಲಿಲ್ಲ. ಕನಿಷ್ಠ ಪಕ್ಷ ಶ್ರದ್ಧಾಂಜಲಿ ಸಭೆಯನ್ನೂ ನಡೆಸಿರಲಿಲ್ಲ ಅಂತ ಟೀಕಿಸಿದ್ದಾರೆ.