ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಟರ್ ಟ್ಯಾಂಕರ್ ಚಾಲಕನ ನಿರ್ಲಕ್ಷ್ಯಕ್ಕೆ ಎಂಬಿಬಿಎಸ್ ವಿದ್ಯಾರ್ಥಿ ಬಲಿಯಾದ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಶಾನ್ (23) ಮೃತ ಎಂಬಿಬಿಎಸ್ ವಿದ್ಯಾರ್ಥಿ.
ನಿನ್ನೆ ಸಂಜೆ ಇಶಾನ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬಂದ ಟ್ಯಾಂಕರ್ ಭೀಕರವಾಗಿ ಡಿಕ್ಕಿ ಹೊಡೆದಿದೆ. ಟ್ಯಾಂಕರ್ ಗುದ್ದಿದ ಪರಿಣಾಮ ಇಶಾನ್ ನೆಲಕ್ಕೆ ಬಿದ್ದಿದ್ದಾರೆ. ಆಗ ಟ್ಯಾಂಕರ್ ಚಕ್ರಗಳು ಇಶಾನ್ ಮೇಲೆ ಹರಿದಿದೆ. ಅಪಘಾತ ಬೆನ್ನಲ್ಲೇ ಚಾಲಕ ಪರಾರಿಯಾಗಲು ಯತ್ನಿಸಿದ್ದ. ನಂತರ ಬೈಕ್ ಸವಾರರು ಫಾಲೋ ಮಾಡಿ ನಿಲ್ಲಿಸಿದ್ದಾರೆ. ಟ್ಯಾಂಕರ್ ಸವಾರನ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಮಾನ್ಯತ ಟೆಕ್ಪಾರ್ಕ್ನಲ್ಲಿ ಮೃತ ವ್ಯಕ್ತಿಯ ಕುಟುಂಬ ವಾಸವಿದೆ. ವಿಷಯ ತಿಳಿದು ಕುಟುಂಬಸ್ಥರು ದುರ್ಘಟನಾ ಸ್ಥಳಕ್ಕೆ ಆಗಮಿಸಿದ್ದರು. ಮಗನ ಮೃತದೇಹ ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅದರಲ್ಲೂ ಇಶಾನ್ ತಾಯಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಶಾನ್ ಎಂಬಿಬಿಎಸ್ ಫೈನಲ್ ಇಯರ್ ಸ್ಟೂಡೆಂಟ್ ಆಗಿದ್ದ. ನಿನ್ನೆ ಸ್ನೇಹಿತನನ್ನ ಮೀಟ್ ಆಗಲು ಥಣಿಸಂದ್ರ ಬಳಿ ಬಂದಿದ್ದ. ಈ ವೇಳೆ ದುರ್ಘಟನೆ ನಡೆದು ಸಾವು ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.