ಹೊಸದಿಗಂತ ವರದಿ ಕಾಸರಗೋಡು:
ಆನ್ ಲೈನ್ ಮೂಲಕ ಖರೀದಿಸಿದ ಕೋಳಿ ಮಾಂಸ ( ಚಿಕನ್ ಕುಯಿಮಂದಿ) ಸೇವಿಸಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾಸರಗೋಡು ಜಿಲ್ಲೆಯ ಮೇಲ್ಪರಂಬ ಸಮೀಪದ ತಲಕ್ಲಾಯಿ ನಿವಾಸಿ ಅಂಜುಶ್ರೀ ಪಾರ್ವತಿ (19) ಮೃತಪಟ್ಟ ಘಟನೆ ನಡೆದಿದೆ.
ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿದ್ದ ಅಂಜುಶ್ರೀ ಕ್ರಿಸ್ ಮಸ್ ರಜೆಯ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದರು. ಈ ವೇಳೆ ಕಾಸರಗೋಡಿನ ಹೋಟೆಲ್ ಒಂದರಿಂದ ಆನ್ ಲೈನ್ ಮೂಲಕ ಚಿಕನ್ ಫುಡ್ ಖರೀದಿಸಿದ್ದು ಅದನ್ನು ಸೇವಿಸಿದ ಕೂಡಲೇ ಆಕೆಗೆ ಅಸೌಖ್ಯತೆ ಕಾಣಿಸಿಕೊಂಡಿತ್ತು. ಕೂಡಲೇ ಕಾಸರಗೋಡು ಆಸ್ಪತ್ರೆಗೂ ಬಳಿಕ ಮಂಗಳೂರು ಆಸ್ಪತ್ರೆಗೂ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಆಕೆ ಕೊನೆಯುಸಿರೆಳೆದರು.
ಈ ಬಗ್ಗೆ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿ ಸಮಗ್ರ ತನಿಖೆ ಕೈಗೊಂಡಿದ್ದಾರೆ. ದಿ.ಕುಮಾರನ್ ನಾಯರ್ – ಅಂಬಿಕಾ ದಂಪತಿಯ ಪುತ್ರಿಯಾದ ಅಂಜುಶ್ರೀ ಅವರು ತಾಯಿ ಅಲ್ಲದೆ ಸಹೋದರ, ಮಂಗಳೂರು ಕಾಲೇಜೊಂದರ ವಿದ್ಯಾರ್ಥಿಯಾದ ಶ್ರೀಕುಮಾರ್ ಅವರನ್ನು ಅಗಲಿದ್ದಾರೆ.