ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಯಲ್ಲಿ ಎಎಪಿ ಗೆದ್ದರೆ 10 ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ಉಚಿತ ವಿದ್ಯುತ್ , ಉಚಿತ ಆರೋಗ್ಯ ಸೇವೆ ಸೇರಿದಂತೆ 10 ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ. ನನ್ನ ಭರವಸೆಗಳು ದಾಖಲೆಯನ್ನು ಸಾಬೀತುಪಡಿಸಿವೆ. ‘ಕೇಜ್ರಿವಾಲ್ ಕಿ ಗ್ಯಾರಂಟಿ’ ಅಥವಾ ‘ಮೋದಿ ಗ್ಯಾರಂಟಿ’ ಯಾವುದು ಬೇಕು ಎಂದು ಜನತೆಗೆ ಕೇಜ್ರಿವಾಲ್ ಕೇಳಿದ್ದಾರೆ.
ಉಚಿತ ವಿದ್ಯುತ್ ನೀಡುವುದು ಕೇಜ್ರಿವಾಲ್ ಅವರ ಚುನಾವಣೆಯ ಪ್ರಮುಖ ಭರವಸೆಯಾಗಿದೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಗಳಿಗೆ ಈ ಸೌಲಭ್ಯ ಒದಗಿಸಲಾಗುವುದು. ದೆಹಲಿಯ ನಿರಂತರ ವಿದ್ಯುತ್ ಪೂರೈಕೆಯ ಮಾದರಿಯನ್ನು ರಾಷ್ಟ್ರವ್ಯಾಪಿ ಪುನರಾವರ್ತಿಸಬೇಕಿದೆ ಎಂದು ತಿಳಿಸಿದ್ದಾರೆ.
10 ಗ್ಯಾರಂಟಿಗಳಲ್ಲಿ ಮೊದಲ ಗ್ಯಾರಂಟಿ, ನಾವು ದೇಶದಲ್ಲಿ 24 ಗಂಟೆಗಳ ವಿದ್ಯುತ್ ಅನ್ನು ಒದಗಿಸುತ್ತೇವೆ. ದೇಶದಲ್ಲಿ 3 ಲಕ್ಷ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿದ್ದರೂ ಬಳಕೆ 2 ಲಕ್ಷ ಮೆಗಾವ್ಯಾಟ್ ಮಾತ್ರ. ನಮ್ಮ ದೇಶವು ಬೇಡಿಕೆಗಿಂತ ಹೆಚ್ಚು ವಿದ್ಯುತ್ ಉತ್ಪಾದಿಸಬಲ್ಲದು. ನಾವು ಅದನ್ನು ದೆಹಲಿ ಮತ್ತು ಪಂಜಾಬ್‌ನಲ್ಲಿ ಮಾಡಿದ್ದೇವೆ. ನಾವು ಅದನ್ನು ದೇಶದಲ್ಲೂ ಮಾಡುತ್ತೇವೆ. ಎಲ್ಲಾ ಬಡವರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತೇವೆ. ಇದಕ್ಕೆ 1.25 ಲಕ್ಷ ಕೋಟಿ ವೆಚ್ಚವಾಗಲಿದೆ. ನಾವು ಅದನ್ನು ವ್ಯವಸ್ಥೆಗೊಳಿಸಬಹುದು ಎಂದು ಹೇಳಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಬೇಕು. ಇದಕ್ಕಾಗಿ 5 ಲಕ್ಷ ಕೋಟಿ ರೂ. ಬೇಕಾಗುತ್ತದೆ. ಒಟ್ಟು ವೆಚ್ಚವನ್ನು ಸರಿದೂಗಿಸಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರವು ತಲಾ 2.5 ಲಕ್ಷ ಕೋಟಿ ರೂ. ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.
ಇಂದು ನಮ್ಮ ಸರ್ಕಾರಿ ಶಾಲೆಗಳ ಸ್ಥಿತಿ ಚೆನ್ನಾಗಿಲ್ಲ. ಎಲ್ಲರಿಗೂ ಒಳ್ಳೆಯ ಮತ್ತು ಅತ್ಯುತ್ತಮವಾದ ಉಚಿತ ಶಿಕ್ಷಣದ ವ್ಯವಸ್ಥೆ ಮಾಡುತ್ತೇವೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುವಂತೆ ದೆಹಲಿ ಮತ್ತು ಪಂಜಾಬ್‌ನಲ್ಲಿ ನಾವು ಮಾಡಿದ್ದೇವೆ. ಇದಕ್ಕಾಗಿ ರಾಜ್ಯ ಸರ್ಕಾರ 2.5 ಲಕ್ಷ ಕೋಟಿ ಹಾಗೂ ಕೇಂದ್ರ ಸರ್ಕಾರ 2.5 ಕೋಟಿ ರೂ. ನೀಡಲಿದೆ ಎಂದು ತಿಳಿಸಿದ್ದಾರೆ.