ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಬಿಜೆಪಿ ಮತ್ತು ಜೆಡಿಎಸ್ ಆಗ್ರಹವನ್ನು ಸಿಎಂ ಸಿದ್ದರಾಮಯ್ಯ ತಳ್ಳಿ ಹಾಕಿದ್ದಾರೆ. ಸಿಬಿಐ ಮೇಲೆ ನನಗೆ ನಂಬಿಕೆ ಇಲ್ಲ ಅಂತಲ್ಲ. ನಮ್ಮ ಪೊಲೀಸರ ಮೇಲೆ ಇವರಿಗೆ ನಂಬಿಕೆ ಇಲ್ಲವೇ? ಎಂದು ಇವರಿಗೆ? ಎಂದು ಹೇಳುವ ಮೂಲಕ ಈ ಪ್ರಕರಣವನ್ನು ಸಿಬಿಐಗೆ ವಹಿಸುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಹಿಂದೆ ಸಿಬಿಐ ಬಗ್ಗೆ ಬಿಜೆಪಿಯವರು ಏನು ಹೇಳಿದ್ದಾರೆ ಗೊತ್ತಾ? ಸಿಬಿಐ ಅಂದರೆ ಕರಪ್ಶನ್ ಬ್ಯೂರೋ ಆಫ್ ಇನ್‌ವೆಸ್ಟಿಗೇಶನ್ ಅಂತ ಹೇಳಿದರು. ಈ ಹಿಂದೆ ಅವರ ಸರ್ಕಾರ ಇದ್ದಾಗ ನಾವು ಎಷ್ಟು ಸಾರಿ ಕೇಳಿದ್ದೇವೆ ಸಿಬಿಐಗೆ ಕೊಡಿ ಅಂತ. ಯಾವತ್ತಾದರೂ ಒಂದು ಪ್ರಕರಣವನ್ನು ಅವರು ಸಿಬಿಐಗೆ ಕೊಟ್ಟಿದ್ದಾರಾ? ಬಿಜೆಪಿ ಹಾಗೂ ಜೆಡಿಎಸ್‌ನವರಿಗೆ ಈ ಪ್ರಕರಣವನ್ನು ಸಿಬಿಐಗೆ ಕೊಡುವುದಕ್ಕೆ ಆಗ್ರಹ ಮಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದರು.
ಈ ಹಿಂದೆ ನಾನು ಸಿಎಂ ಆಗಿದ್ದಾಗ ಸಿಬಿಐಗೆ 7 ಕೇಸ್ ಕೊಟ್ಟಿದ್ದೆ. ಆ ಕೇಸ್‌ಗಳಲ್ಲಿ ಏನಾಯಿತು? ಸಿಬಿಐ ಮೇಲೆ ನನಗೆ ನಂಬಿಕೆ ಇಲ್ಲ ಅಂತಲ್ಲ. ಯಾಕೆ ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ವಾ ಇವರಿಗೆ? ಬಿಜೆಪಿಯವರಿಗೆ ಸುಳ್ಳು ಆರೋಪ ಮಾಡುವುದೇ ಕಸುಬಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಸಂತ್ತಸ್ತೆಯ ದೂರಿನ ಮೇಲೆ ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಅವರನ್ನು ಅರೆಸ್ಡ್ ಮಾಡಲಾಗಿದೆ. ನಾವು ಪೊಲೀಸ್ ತನಿಖೆಯಲ್ಲಿ ಮಧ್ಯ ಪ್ರವೇಶ ಮಾಡುತ್ತಿಲ್ಲ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಪ್ರಲ್ಹಾದ್ ಜೋಶಿ ಜವಾಬ್ದಾರಿಯಿಂದ ಮಾತನಾಡಲಿ. ಉತ್ತರ ಕನ್ನಡ ಜಿಲ್ಲೆಯ ಪರೇಶ್ ಮೇಸ್ತಾ ಕೇಸಲ್ಲಿ ಏನ್ರೀ ಆಯ್ತು? ಸಿಬಿಐಗೆ ಕೊಟ್ಟ ಮೇಲೆ ಏನಾಯ್ತು ಆ ಕೇಸ್? ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಎಸ್ಐಟಿ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.