ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಸಭೆ ಆಪ್ ಸದಸ್ಯೆ ಸ್ವಾತಿ ಮಾಲಿವಾಲ್ ಅವರ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿಯೇ ಹಲ್ಲೆ ನಡೆದಿದೆ.
ದೆಹಲಿ ಮುಖ್ಯಮಂತ್ರಿ ನಿವಾಸದ ಸಿವಿಲ್ ಲೈನ್‌ನಿಂದಲೇ ಕರೆ ಬಂದಿದ್ದು, ಸ್ವಾತಿ ಮಾಲಿವಾಲ್ ಅವರ ಹೆಸರಿನಲ್ಲಿ ಹಲ್ಲೆ ಕುರಿತು ಮಾಹಿತಿ ನೀಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ 9.34ರ ಸುಮಾರಿಗೆ ಪಿಎಸ್ ಸಿವಿಲ್ ಲೈನ್‌ಗಳಿಂದ ಮೊದಲ ಕರೆ ಬಂತು. ಮಹಿಳೆಯೊಬ್ಬರು ಕರೆ ಮಾಡಿ, ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿದರು. ಇದಾದ ಬಳಿಕ, ಸಂಸದೆ ಮಾಲಿವಾಲ್ ಅವರು ಸಿವಿಲ್ ಲೈನ್‌ಗೆ ಬಂದರು. ನಾನು ದೂರು ನೀಡುತ್ತೇನೆ ಎಂಬುದಾಗಿ ತಿಳಿಸಿದರು. ನಂತರ ಪೊಲೀಸರ ತಂಡವು ದೆಹಲಿ ಸಿಎಂ ನಿವಾಸದ ಬಳಿ ತೆರಳಿ ಸ್ವಾತಿ ಮಾಲಿವಾಲ್ ಅವರನ್ನು ಪೊಲೀಸ್ ಸ್ಟೇಷನ್‌ಗೆ ಕರೆದುಕೊಂಡು ಹೋದರು. ಶಿಷ್ಟಾಚಾರದ ಪ್ರಕಾರ ದೆಹಲಿ ಪೊಲೀಸರು ಅನುಮತಿ ಇಲ್ಲದೆ ದೆಹಲಿ ಸಿಎಂ ನಿವಾಸದೊಳಗೆ ಹೋಗುವಂತಿರಲಿಲ್ಲ. ಅದಕ್ಕಾಗಿ ಅವರನ್ನು ಠಾಣೆಗೆ ಕರೆದುಕೊಂಡು ಹೋಗಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿ ಸಿಎಂ ಅವರ ಆಪ್ತ ವೈಭವ್ ಕುಮಾರ್ ಅವರಿಂದಲೇ ಹಲ್ಲೆ ನಡೆಸಲಾಗಿದೆಎಂಬ ಮಾಹಿತಿ ನೀಡಲಾಯಿತು ಎಂದಿದ್ದಾರೆ. ಆದಾಗ್ಯೂ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ವೈಭವ್ ಕುಮಾರ್ ಅವರು ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದಾರೆ. ಇವರು ಹಲ್ಲೆ ನಡೆಸಿದ್ದಾರೆ ಎಂಬುದಾಗಿ ಸ್ವಾತಿ ಮಾಲಿವಾಲ್ ಕರೆಯಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.