ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಯ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಹಾರದ ಪಾಟ್ನಾದಲ್ಲಿರುವ ಸಿಖ್ ಗುರುದ್ವಾರಕ್ಕೆ ಭೇಟಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪಾಟ್ನಾದಲ್ಲಿರುವ ತಾಕತ್ ಶ್ರೀ ಪಾಟ್ನಾ ಸಾಹಿಬ್ ಜೀ ಗುರುದ್ವಾರದ ದರ್ಬಾರ್ ಸಾಹೀಬ್‌ಗೆ ಇಂದು ಮುಂಜಾನೆ ಭೇಟಿ ನೀಡಿದ ಪ್ರಧಾನಿ ಅಲ್ಲಿ ಸಿಖ್ ಗುರುವಿಗೆ ನಮನ ಸಲ್ಲಿಸಿದರು.
ಸಾಂಪ್ರದಾಯಿಕ ಕುರ್ತಾ, ಕೇಸರಿ ಸಿಖ್ ಪೇಟ ಧರಿಸಿದ ಅವರು ಬಳಿಕ ಗುರುದ್ವಾರಕ್ಕೆ ಬಂದಿದ್ದ ಭಕ್ತರಿಗೆ ವಿಶೇಷ ಪ್ರಸಾದ ತಯಾರಿಸಿ, ಬಡಿಸಿದ್ದಾರೆ. ನಂತರ ಗುರುದ್ವಾರದಲ್ಲಿ `ಕರಃ ಪ್ರಸಾದ’ವನ್ನು ತೆಗೆದುಕೊಂಡರು. ಈ ವೇಳೆ ಡಿಜಿಟಲ್ ಪಾವತಿ ವಿಧಾನ ಬಳಸಿ ಹಣ ಸಂದಾಯ ಮಾಡಿದರು. ಈ ವೇಳೆ ಗುರುದ್ವಾರದ ಸಮಿತಿಯವರು ಪ್ರಧಾನಿಯವರಿಗೆ ಸನ್ಮಾನ ಪತ್ರದ ಜೊತೆ ಮಾತಾ ಗುಜ್ರಿ ಜೀ ಅವರ ಫೋಟೋವನ್ನು ಉಡುಗೊರೆಯಾಗಿ ನೀಡಿದರು.
ಸತತ ಮೂರನೇ ಬಾರಿಗೆ ಪ್ರಧಾನಿ ಹುದ್ದೆ ಏರುವ ನಿರೀಕ್ಷೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.
ಪಾಟ್ನಾ ಸಾಹಿಬ್ ವಿಶೇಷವೇನು?:
ತಖತ್ ಶ್ರೀ ಪಾಟ್ನಾ ಸಾಹಿಬ್‍ನ್ನು ತಖತ್ ಶ್ರೀ ಹರಿಮಂದಿರ್ ಜಿ, ಪಾಟ್ನಾ ಸಾಹಿಬ್ ಎಂದು ಸಹ ಕರೆಯುತ್ತಾರೆ. ಇದು ಪಾಟ್ನದಲ್ಲಿರುವ ಸಿಖ್ಖರ ಐದು ತಖತ್‍ಗಳಲ್ಲಿ ಒಂದಾಗಿದೆ. ಗುರು ಗೋಬಿಂದ್ ಸಿಂಗ್ ಅವರ ಜನ್ಮಸ್ಥಳವನ್ನು ಗುರುತಿಸಲು 18 ನೇ ಶತಮಾನದಲ್ಲಿ ಮಹಾರಾಜ ರಂಜಿತ್ ಸಿಂಗ್ ಈ ತಖತ್ ನಿರ್ಮಿಸಿದನು.ಹತ್ತನೇ ಸಿಖ್ ಗುರುವಾದ ಗುರು ಗೋಬಿಂದ್ ಸಿಂಗ್ ಅವರು 1666 ರಲ್ಲಿ ಪಾಟ್ನಾದಲ್ಲಿ ಜನಿಸಿದರು. ಅವರು ಆನಂದಪುರ ಸಾಹಿಬ್‍ಗೆ ತೆರಳುವ ಮೊದಲು ಕೆಲವು ವರ್ಷಗಳ ಕಾಲ ಇಲ್ಲಿಯೇ ಕಳೆದಿದ್ದರು.