ಹೊಸದಿಗಂತ ವರದಿ ಉಳ್ಳಾಲ:
ದೇಶ ಕಂಡ ಅಪ್ರತಿಮ ಸಾಹಸಿ, ವೀರ ರಾಣಿ ಅಬ್ಬಕ್ಕಳ ಸ್ಮರಣೆಯ ಅಬ್ಬಕ್ಕ ಉತ್ಸವಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟಿನ ಒಳಪೇಟೆ ಅಂಬೇಡ್ಕರ್ ಮೈದಾನದಲ್ಲಿ ಸಂಭ್ರಮದ ಚಾಲನೆ ಸಿಕ್ಕಿದೆ.
ಉತ್ಸವ ಉದ್ಘಾಟಿಸಿದ ರಾಣಿ ಅಬ್ಬಕ್ಕ ವಂಶಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್ ಮಾತನಾಡಿ, ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಅಬ್ಬಕ್ಕಳ ಕುರಿತಂತೆ ದೇಶದ ವಿವಿಧೆಡೆಗಳಲ್ಲಿ ಕಾರ್ಯಕ್ರಮಗಳು, ಆಕೆಯ ಪ್ರತಿಮೆಗಳ ಅನಾವರಣ ಆಗುತ್ತಿರುವುದು ಹೆಮ್ಮೆಯ ವಿಚಾರ. ಐನೂರು ವರುಷಗಳ ಬಳಿಕವೂ ಅಬ್ಬಕ್ಕಳನ್ನ ನಾವು ನೆನೆಯುತ್ತಿರುವುದು ಆಕೆಯ ಮೇಲಿನ ಅಭಿಮಾನದ ಪ್ರತೀಕವಾಗಿದೆ ಎಂದರು.
ಉಳ್ಳಾಲದಲ್ಲಿ ನಡೆಯುತ್ತಿರುವ ಈ ಉತ್ಸವವವು ಅಬ್ಬಕ್ಕ ರಾಣಿಯ ಗತವೈಭವವನ್ನ ಮರುಕಳಿಸುವಂತೆ ಮಾಡಿದೆ ಎಂದರು.
ಇದೆ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ. ಸಾಯಿಗೀತಾ ಹೆಗ್ಡೆ ಮತ್ತು ಭರತನಾಟ್ಯ ಕ್ಷೇತ್ರದ ಸಾಧನೆಗಾಗಿ ಉಳ್ಳಾಲ ನಾಟ್ಯನಿಕೇತನ ನೃತ್ಯ ಸಂಸ್ಥೆಯ ಪ್ರಾಂಶುಪಾಲೆ ರಾಜಶ್ರೀ ಉಳ್ಳಾಲ್ ಅವರಿಗೆ ವೀರರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸ್ವದೇಶಿ ಪ್ರೇಮ, ಸ್ವಾಭಿಮಾನವುಳ್ಳ ಸಮೃದ್ಧ ದೇಶ ನಮ್ಮದಾಗಬೇಕೆಂಬ ಚಿಂತನೆ ವೀರ ರಾಣಿ ಅಬ್ಬಕ್ಕಳದಾಗಿತ್ತು. ಅಬ್ಬಕ್ಕಳ ಅದ್ಭುತ ಚಿಂತನೆಯನ್ನು ನಾವು ಕಾರ್ಯರೂಪಕ್ಕೆ ತರಬೇಕಿದೆ. ಪ್ರತಿಯೊಬ್ಬ ನಾಗರಿಕನೂ ತನ್ನ ಹೊಣೆಗಾರಿಕೆಯನ್ನು ಅರಿತು ನಡೆದುಕೊಂಡಾಗ ಮಾತ್ರ ನಿಜವಾದ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಡಿ.ಎಸ್ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಪೆರ್ಮನ್ನೂರು ಚರ್ಚ್ ನ ಧರ್ಮಗುರುಗಳಾದ ಸಿಪ್ರಿಯನ್ ಪಿಂಟೋ, ಹಾವೇರಿ ವಿವಿ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ,ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರನಾಥ ಗಟ್ಟಿ, ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಉಮರ್ ಯು.ಹೆಚ್, ಮನಪಾ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಸುರೇಶ್ ಭಟ್ನಗರ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷರಾದ ಯಶವಂತ ಅಮೀನ್, ಕೋಟೆಕಾರು ಪ.ಪಂ ಅಧ್ಯಕ್ಷರಾದ ದಿವ್ಯ ಶೆಟ್ಟಿ,ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷರಾದ ರವಿಶಂಕರ ಸೋಮೇಶ್ವರ, ಉಳ್ಳಾಲ ನಗರಸಭೆ ಪೌರಾಯುಕ್ತರಾದ ಸಂತೋಷ್. ಡಿ, ಹಿರಿಯ ರೈತ ಮುಖಂಡರಾದ ಕೃಷ್ಣಪ್ಪ ಸಾಲಿಯಾನ್, ಅಬ್ಬಕ್ಕ ಉತ್ಸವ ಸಮಿತಿಯ ಪದಾಧಿಕಾರಿಗಳಾದ ಹೈದರ್ ಪರ್ತಿಪ್ಪಾಡಿ, ಸದಾನಂದ ಬಂಗೇರ, ದೇವಕಿ ಉಳ್ಳಾಲ್, ಸ್ವಪ್ನ ಶೆಟ್ಟಿ,ಶಶಿಕಲಾ ಗಟ್ಟಿ,ಮಾಧವಿ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ:
ಮಂಗಳೂರು ಆಸರೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಆಶಾ ಜ್ಯೋತಿ ರೈಯವರು ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎಂಭತ್ತನೇ ವರುಷದ ಹುಟ್ಟು ದಿನ ಆಚರಿಸುತ್ತಿರುವ ಅಬ್ಬಕ್ಕ ಉತ್ಸವ ಸಮಿತಿಯ ಸ್ವಾಗತಾಧ್ಯಕ್ಷರು ಮಾಜಿ ಶಾಸಕರಾದ ಕೆ. ಜಯರಾಮ ಶೆಟ್ಟಿಯವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಉತ್ಸವ ಸಮಿತಿಯ ಅಧ್ಯಕ್ಷರಾದ ದಿನಕರ ಉಳ್ಳಾಲ್ ಸ್ವಾಗತಿಸಿದರು. ಪ್ರ.ಕಾ ಧನಲಕ್ಷ್ಮೀ ಗಟ್ಟಿ ನಿರೂಪಿಸಿದರು. ಆನಂದ.ಕೆ ಅಸೈಗೋಳಿ ವಂದಿಸಿದರು.



