ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರ(Jammu And Kashmir)ಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ(Article 370)ಯನ್ನು ತೆಗೆದು ಹಾಕಲು ಇದ್ದ ಕಾರಣವನ್ನು ಪ್ರಧಾನಿ ಮೋದಿ ಇಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿರುವ ಅವರು ಮಂಗಳವಾರ 32 ಸಾವಿರ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಬಳಿಕ ಮೌಲಾನಾ ಆಜಾದ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿಪಕ್ಷಗಳ ವಿರುದ್ಧ ಕಿಡಿಕಾಡಿದರು.
ವಂಶಾಡಳಿತ ರಾಜಕಾರಣದಲ್ಲಿ ತೊಡಗಿರುವ ರಾಜಕೀಯ ಪಕ್ಷಗಳು ಕೇವಲ ಅವರ ಹಿತಾಸಕ್ತಿಯ ಬಗ್ಗೆ ಮಾತ್ರ ಕಾಳಜಿ ವಹಿಸಿವೆ. ಜಮ್ಮು ಮತ್ತು ಕಾಶ್ಮೀರವು ದಶಕಗಳ ಕಾಲ ರಾಜವಂಶದ ರಾಜಕೀಯದ ಹೊಡೆತವನ್ನು ಅನುಭವಿಸಬೇಕಾಯಿತು. ಅವರು ತಮ್ಮ ಕುಟುಂಬದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ, ನಿಮ್ಮ ಹಿತಾಸಕ್ತಿಗಳ ಬಗ್ಗೆ ಅವರು ಚಿಂತಿಸುವುದಿಲ್ಲ. ಈ ರಾಜವಂಶದ ರಾಜಕೀಯದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಹೇಳಿದರು.
370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಅಡ್ಡಗೋಡೆಯಂತಿತ್ತು. ಈ ಗೋಡೆಯನ್ನು ಕೇಂದ್ರ ಸರ್ಕಾರ ಕೆಡವಿದೆ. ಅದನ್ನು ತೆಗೆದುಹಾಕಿದ ನಂತರ ರಾಜ್ಯದ ಜನರಿಗೆ ಪರಿಹಾರವೂ ಸಿಕ್ಕಿದೆ. ಮಹಿಳೆಯರು ಈ ಮೊದಲು ಪಡೆದಿರದ ಹಕ್ಕುಗಳನ್ನು ಪಡೆದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಲೆಗಳಿಗೆ ಬೆಂಕಿ ಹಚ್ಚಿದ ದಿನಗಳು ಇದ್ದವು, ಇಂದು ಶಾಲೆಗಳನ್ನು ಅಲಂಕರಿಸುವ ದಿನಗಳು ಬಂದಿವೆ. ಈ ಹಿಂದೆ ತೀವ್ರ ಅನಾರೋಗ್ಯದ ಚಿಕಿತ್ಸೆಗಾಗಿ ದೆಹಲಿಗೆ ಹೋಗಬೇಕಿತ್ತು. ಆದರೆ ಈಗ ಜಮ್ಮುವಿನಲ್ಲೇ ಏಮ್ಸ್ ಸಿದ್ಧವಾಗಿದೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರವು ಈಗ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗುತ್ತಿದೆ. ಇದು 370ನೇ ವಿಧಿಯನ್ನು ರದ್ದುಗೊಳಿಸಿರುವುದರಿಂದ ನಾನು ಜನರಲ್ಲಿ ಒಂದು ಮನವಿಯನ್ನು ಮಾಡುತ್ತೇನೆ. ಮುಂಬರುವ 2024 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370 ಸ್ಥಾನಗಳನ್ನು ಮತ್ತು ಎನ್‌ಡಿಎ 400 ಸ್ಥಾನಗಳನ್ನು ಗೆಲುವು ಸಾಧಿಸಲು ನಿಮ್ಮ ಆರ್ಶೀವಾದ ಮಾಡಬೇಕು ಎಂದು ಮನವಿ ಮಾಡಿದರು.
ಈ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬಾಂಬ್‌ಗಳು, ಅಪಹರಣಗಳು ಮತ್ತು ಪ್ರತ್ಯೇಕತೆಯ ಸುದ್ದಿಯೇ ಇರುತ್ತಿತ್ತು. ಆದರೆ ಈಗ ಜಮ್ಮು ಮತ್ತು ಕಾಶ್ಮೀರವು ಅಭಿವೃದ್ಧಿ ಹೊಂದುತ್ತಿದೆ ಮತ್ತು ಮುನ್ನಡೆಯುತ್ತಿದೆ. ಆದರೆ ಈಗ ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ಈಗ ನಾವು ಅಭಿವೃದ್ಧಿ ಹೊಂದಿದ ಜಮ್ಮು ಮತ್ತು ಕಾಶ್ಮೀರಕ್ಕಾಗಿ ಪ್ರತಿಜ್ಞೆ ಮಾಡಿದ್ದೇವೆ. ಜಮ್ಮು ಮತ್ತು ಕಾಶ್ಮೀರವನ್ನು ಅಭಿವೃದ್ಧಿ ಪಡಿಸುತ್ತೇವೆ ಎಂಬ ನಂಬಿಕೆ ನಿಮ್ಮ ಮೇಲಿದೆ. ಕಳೆದ 70 ವರ್ಷಗಳಿಂದ ನನಸಾಗದ ನಿಮ್ಮ ಕನಸುಗಳನ್ನು ಮುಂಬರುವ ಕೆಲವೇ ವರ್ಷಗಳಲ್ಲಿ ನರೇಂದ್ರ ಮೋದಿ ಈಡೇರಿಸಲಿದ್ದಾರೆ ಎಂದು ಹೇಳಿದರು.