ಹೊಸದಿಗಂತ ವರದಿ ಬಳ್ಳಾರಿ:
ಎಬಿವಿಪಿ ಶುದ್ಧ ಹಾಗೂ ಸಾತ್ವಿಕ ಪರಿಷತ್, ಮಕ್ಕಳಿಗಾಗಿ, ಮಕ್ಕಳ ಶಿಕ್ಷಣಕ್ಕಾಗಿ ದೇಶಾದ್ಯಂತ ಶ್ರಮಿಸುತ್ತಿರುವ ಸಂಘಟನೆ ನಮ್ಮದು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಹೇಳಿದರು.
ನಗರದ ಕೊಳಗಲ್ ರಸ್ತೆಯ ಬಾಲ ಭಾರತಿ ಕೇಂದ್ರೀಯ ವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ದೇಶದಲ್ಲಿ ಎಬಿವಿಪಿ ಹೆಮ್ಮರವಾಗಿ ಬೆಳೆದಿದ್ದು, ಮಕ್ಕಳ ಶಿಕ್ಷಣದ ಕುರಿತು ಯಾವುದೇ ಸಮಸ್ಯೆ, ಯಾವುದೇ ತೊಂದರೆಗಳು ಎದುರಾದರೆ ಮೊದಲು ಧ್ವನಿ ಎತ್ತುವುದು ನಮ್ಮ ಸಂಘಟನೆ ಎಂದರು.
ಕಾಂಗ್ರೆಸ್, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಹಾಗೂ ಸಿದ್ದಾಂತಗಳ ವಿರುದ್ಧ ಇದೆ. ಎಸ್ಸಿ ಹಾಗೂ ಎಸ್ಟಿ ವರ್ಗದ ಮಕ್ಕಳ ಶಿಕ್ಷಣದ ಕುರಿತು ಡಾ.ಬಿ.ಆರ್.
ಅಂಬೇಡ್ಕರ್ ಅವರು ಕನಸುಕಂಡಿದ್ದರು. ದೇಶದಲ್ಕಿ ಹೆಚ್ಚು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಅಂಬೇಡ್ಕರ್ ಅವರ ಕನಸನ್ನು ನುಚ್ಚುನೂರು ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಒಡೆದಾಳುವ ನೀತಿ ಅನುಸರಿಸುವ ಪಕ್ಷ, ಇವಾಗಲ್ಲ, ಮೊದಲಿನಿಂದಲೂ ಅದನ್ನೇ ಮಾಡಿಕೊಂಡು ಬಂದಿದೆ. ಕೇಂದ್ರ ಸರ್ಕಾರ ಹೊಸ ಶಿಕ್ಷಣ ಪದ್ದತಿ ಜಾರಿಗೊಳಿಸಿದರೆ, ಅದನ್ನು ಕಾಂಗ್ರೆಸ್ ವಿರೋಧಿಸಿದೆ. ಸರ್ವಾಂಗೀಣ ಅಭಿವೃದ್ಧಿ ಕನಸು ಇಟ್ಟುಕೊಂಡು ಈ ಪದ್ಧತಿ ಜಾರಿಗೊಳಿಸಿದರೆ, ಅದಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕಿದೆ ಎಂದರು.
ದೇಶವನ್ನು ಅತಿಹೆಚ್ಚು ಅವಧಿಯಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಶಿಕ್ಷಣ ಪದ್ದತಿಯನ್ನೇ ಹಾಳು ಮಾಡಿದೆ. ಮಕ್ಕಳ ಶಿಕ್ಷಣಕ್ಕಾಗಿ ಯಾವುದೇ ಯೋಜನೆಗಳನ್ನು ಜಾರಿಗೊಳಿಸಲಿಲ್ಲ, ಗಮನಹರಿಸಲಿಲ್ಲ ಎಂದು ಸಿಬಿಐ ನಿವೃತ್ತ ಅಧಿಕಾರಿ ನಾಗೇಶ್ವರ ರಾವ್ ಅವರು, ನಿವೃತ್ತಿಯಾದ ಬಳಿಕ ಟ್ವೀಟ್ ಮಾಡಿದ್ದರು ಎಂದು ಮೆಲುಕು ಹಾಕಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು, ಕೇವಲ ಎಸ್ಸಿ, ಎಸ್ಟಿ ಸಮುದಾಯವರಿಗೆ ಸೀಮಿತವಾಗದೇ ಎಲ್ಲ ವರ್ಗದವರ ಮಹಾನ್ ಚೇತನರಾಗಿದ್ದರು. ಮಹಾರಾಷ್ಟ್ರದ ಮರಾಠವಾಡ ವಿಶ್ವವಿದ್ಯಾಲಯಕ್ಕೆ ಬೇರೆ ಹೆಸರು ನಾಮಕರಣ ಮಾಡುವ ಚರ್ಚೆಗಳು ಮುನ್ನೆಲೆಗೆ ಬಂದಾಗ, ವಿಶ್ವವಿದ್ಯಾಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ನಮ್ಮ ಕಾರ್ಯಕರ್ತರು ಸಂಕಲ್ಪ ಮಾಡಿ, ಪ್ರತಿ ಮನೆ ಮನೆಗೆ ತೆರಳಿ, ಮನವೊಲಿಸಲಾಗಿತ್ತು. ನಂತರ ವಿಶ್ವವಿದ್ಯಾಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ನಾಮಕರಣ ಮಾಡಲಾಯಿತು ಎಂದರು.
ಇದಕ್ಕೂ ಮುನ್ನ ಎಬಿವಿಪಿ ರಾಜ್ಯ ಉಪಾಧ್ಯಕ್ಷ ನಿಜಾನಂದ ರೆಡ್ಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಪೃಥ್ವಿ ಕುಮಾರ್, ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಶಿವಾನಿ ಶೆಟ್ಟಿ, ಡಾ.ಅಲ್ಲಮಪ್ರಭು, ಡಾ.ನಿತೀಶ್ ಬಾಳೆಕಾಯಿ, ಡಾ.ಆನಂದ್, ಶ್ರೀಮೇಧಾ ಕಾಲೇಜು ಸಂಸ್ಥಾಪಕ, ಎಬಿವಿಪಿ ಜಿಲ್ಲಾ ಪ್ರಮುಖ್ ಡಾ.ರಾಮ್ ಕಿರಣ್, ವಿಭಾಗದ ಪ್ರಮುಖ ಪತ್ತಾರ್ ಇತರರಿದ್ದರು.