Sunday, December 10, 2023

Latest Posts

ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸಭೆ | ಯುವಜನರಿಗೆ ನಿಶ್ಚಿತ ಗುರಿ, ದೃಷ್ಟಿಕೋನ ಇರಬೇಕು: ಡಾ.ಬಿ.ರಾಜಶೇಖರಪ್ಪ

ಹೊಸದಿಗಂತ ವರದಿ, ಚಿತ್ರದುರ್ಗ:

ಯುವಶಕ್ತಿ ದೇಶದ ಸಂಪತ್ತು. ಹಾಗಾಗಿ ಯುವಜನರು ನಿಶ್ಚಿತ ಗುರಿ, ನಿಶ್ಚಿತ ದೃಷ್ಠಿಕೋನ ಇಟ್ಟುಕೊಂಡು ಸಾಧನೆಗೆ ಮುಂದಾಗಬೇಕು ಎಂದು ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಕರೆ ನೀಡಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಜನತೆ ದಾರಿ ತಪ್ಪಿದೆ. ಅವರಿಗೆ ಸೂಕ್ತ ಮಾರ್ಗದರ್ಶನ ಇಲ್ಲ. ನಿಖರವಾದ ಗೊತ್ತು, ಗುರಿ ಇಲ್ಲ. ದೇಶಭಕ್ತಿ, ಭಾಷಾಭಿಮಾನ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇಂತಹ ಆರೋಪಗಳನ್ನು ನಿವಾರಿಸುವ ನಿಟ್ಟಿನಲ್ಲಿ ಯುವಜನತೆ ಮುಂದಾಗಬೇಕು. ನಿಜವಾದ ಭಾರತೀಯ ವ್ಯಕ್ತಿತ್ವ ನಿಮ್ಮಲ್ಲಿ ಮೂಡಿಬರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ನಮ್ಮ ದೇಶದ ಪರಂಪರೆ, ಸಂಸ್ಕೃತಿಯನ್ನು ಗೌರವಿಸುವ ಕೆಲಸವಾಗಬೇಕು. ಇತಿಹಾಸ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಕೆಲಸಕ್ಕೆ ಮುಂದಾಗಬೇಕು. ನಮ್ಮ ದೇಶದಲ್ಲಿ ಅನೇಕ ಆದರ್ಶ ವ್ಯಕ್ತಿಗಳು, ಹೋರಾಟಗಾರರು, ಸಮಾಜ ಸುಧಾರಕರು ಬಂದು ಹೋಗಿದ್ದಾರೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಯಾವುದೇ ಆಕರ್ಷಣೆಗಳಿಗೆ ಒಳಗಾಗದೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಉತ್ತಮ ನಾಗರೀಕರಾಗಬೇಕು ಎಂದರು.
ಮಂಡ್ಯ ಜಿಲ್ಲಾ ವಿಭಾಗ ಪ್ರಮುಖ ರವಿ ಮಂಡ್ಯ ಮಾತನಾಡಿ, ಕಳೆದ ೭೫ ವರ್ಷಗಳ ಹಿಂದೆ ಅಸ್ಥಿತ್ವಕ್ಕೆ ಬಂದ ಎಬಿವಿಪಿ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಮೂಡಿಸುತ್ತಿದೆ. ನಮ್ಮ ದೇಶಕ್ಕೆ ಬಂದಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕಾದ ಜವಾಬ್ಧಾರಿ ಯುವಕರ ಮೇಲಿದೆ. ಹಾಗಾಗಿ ಅವರು ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು. ಇಡೀ ರಾಷ್ಟ್ರ ಆಧುನಿಕ ಭಾರತವಾಗಬೇಕು. ದೇಶ ಸಮೃದ್ಧವಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸನ್ನದ್ದರಾಗಬೇಕು ಎಂದು ಹೇಳಿದರು.
ಎಬಿವಿಪಿ ಶಿಕ್ಷಣದ ವ್ಯಾಪಾರೀಕರಣದ ವಿರುದ್ಧ ಹೋರಾಟ ನಡೆಸುತ್ತಾ ಬಂದಿದೆ. ರಾಷ್ಟ್ರ, ಸಮಾಜ, ಸಂಸ್ಕೃತಿಗೆ ಧಕ್ಕೆ ಬಂದಾಗ ಸಿಡಿದು ನಿಂತಿದೆ. ಮೆಕಾಲೆ ಶಿಕ್ಷಣ ನೀತಿ ಬದಲಾಯಿಸಿ, ಈ ಮಣ್ಣಿನ ಶಿಕ್ಷಣವನ್ನು ಜಾರಿಗೆ ತರಬೇಕೆಂಬ ಹೋರಾಟ ನಡೆಸಿದೆ. ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸುವಲ್ಲಿ ಸಾವಿರಾರು ವಿದ್ಯಾರ್ಥಿಗಳು ಕೆಚ್ಚೆದೆ ತೋರಿದ್ದಾರೆ. ಬಾಂಗ್ಲಾ ದೇಶದಿಂದ ಬರುವ ನುಸುಳುಕೋರರನ್ನು ತಡೆಯುವಲ್ಲಿ ಹೋರಾಟ ನಡೆಸಿದೆ ಎಂದರು.
ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದ ಬಳಿಯ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲಾಗಿದೆ. ಜೆಎನ್‌ಯು ವಿಶ್ವವಿದ್ಯಾನಿಲಯದಲ್ಲಿದ್ದ ತುಕಡೆ ಗ್ಯಾಂಗ್ ವಿರುದ್ಧ ಹೋರಾಟ ನಡೆಸಿದೆ. ಕಮ್ಯೂನಿಸ್ಟರು, ಮಾವೋವಾದಿಗಳ ಕಪಿಮುಷ್ಠಿಯಲ್ಲಿದ್ದ ಜೆಎನ್‌ಯು ವಿಶ್ವವಿದ್ಯಾನಿಲಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಎಬಿವಿಪಿ ಯಶಸ್ವಿಯಾಗಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಅನೇಕ ಎಬಿವಿಪಿ ಕಾರ್ಯಕರ್ತರು ಸಂತ್ರಸ್ಥರ ನೆರವಿಗೆ ಧಾವಿಸಿದ್ದಾರೆ. ಹಾಸ್ಟೆಲ್ ಸಮಸ್ಯೆ, ಬಸ್‌ಪಾಸ್ ಸಮಸ್ಯೆ ಸೇರಿದಂತೆ ವಿದ್ಯಾರ್ಥಿಗಳ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ನಡೆಸುತ್ತಾ ಬಂದಿದೆ ಎಂದು ವಿವರಿಸಿದರು.
ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರೇಮಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿ ಸಂಘಟನೆಯಲ್ಲಿ ಕಾರ್ಯಕಾರಿಣಿ ಬಹುಮುಖ್ಯ ಅಂಶ. ಹಾಗಾಗಿ ಇಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಲಾಗುತ್ತಿದೆ. ಎರಡು ದಿನಗಳ ಕಾಲ ನಡೆಯುವ ಈ ಸಭೆಯಲ್ಲಿ ಅನೇಕ ವಿಚಾರಗಳನ್ನು ಚರ್ಚಿಸಲಾಗುವುದು. ಸಂಘಟನಾತ್ಮಕ, ಕಾರ್ಯಾತ್ಮಕ ಚಟುವಟಿಕೆಗಳಲ್ಲಿ ಸ್ಪಷ್ಟತೆ ಇರಬೇಕು. ಅಂತಹ ಕಾರ್ಯ ಇಲ್ಲಿ ನಡೆಯುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವೇಶ್ವರ ವೇದಿಕೆಯಲ್ಲಿದ್ದರು. ಎಬಿವಿಪಿ ಹಿರಿಯ ಕಾರ್ಯಕರ್ತರು, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!