ಹೊಸದಿಗಂತ ವರದಿ ಕಲಬುರಗಿ:
ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇದೇ ಡಿ.27,28 ಮತ್ತು 29ರಂದು ಮೂರು ದಿನಗಳ ಕಾಲ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 16 ಜಿಲ್ಲೆಗಳ ಒಳಗೊಂಡ 44ನೇ ರಾಜ್ಯ ಮಟ್ಟದ ಸಮ್ಮೇಳನ ನಡೆಯಲಿದೆ ಎಂದು ಎಬಿವಿಪಿ ಉತ್ತರ ಪ್ರಾಂತ ಕಾರ್ಯದರ್ಶಿ ಸಚಿನ ಕುಳಗೇರಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು,ಡಿ.27ರ ಬೆಳಿಗ್ಗೆ 11 ಗಂಟೆಗೆ ಗಂಟೆಗೆ ಸಮ್ಮೇಳನದ ಉದ್ಘಾಟನೆ ನಡೆಯಲಿದ್ದು,ಸಂಸದ, ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಸಿ.ಎನ್.ಮಂಜುನಾಥ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಾಡೋಜ ಮುನಿವೆಂಕಟಪ್ಪ ಹಾಗೂ ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರವಣಕುಮಾರ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ಪಂಚ ಪರಿವರ್ತನೆ ವಿಷಯದ ಮೇಲೆ ಸಂಜೆ 5 ಗಂಟೆಗೆ ವಿಶೇಷ ಭಾಷಣ -01 ನಡೆಯಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಪ್ರಾಂತ ಪ್ರಚಾರಕ ಕೃಷ್ಣ ಜೋಶಿ ನಡೆಸಿಕೊಡಲಿದ್ದಾರೆ.
ಡಿ.28ರಂದು ಬೆಳಿಗ್ಗೆ 11 ಗಂಟೆಗೆ ಕ್ಯಾಂಪಸ್ ಕಾರ್ಯದ ಕುರಿತು ವಿಶೇಷ ಭಾಷಣ -02 ನಡೆಯಲಿದ್ದು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಅವರು ನಡೆಸಿಕೊಡಲಿದ್ದು,ಅಂದು ಸಂಜೆ 4:30 ಗಂಟೆಗೆ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಿಂದ ಶ್ರೀ ಶರಣಬಸವೇಶ್ವರ ದೇವಸ್ಥಾನದ ವರೆಗೆ ಶೋಭಾಯಾತ್ರೆ ನಡೆಯಲಿದೆ.ಶೋಭಾಯಾತ್ರೆಯ ಬಳಿಕ ಸಾರ್ವಜನಿಕ ಸಭೆ ನಡೆಯಲಿದ್ದು, ರಾಜ್ಯದ ವಿದ್ಯಾರ್ಥಿ ನಾಯಕರಿಂದ ಭಾಷಣ ಆಯೋಜಿಸಲಾಗಿದೆ ಎಂದರು.
ಡಿ.29ರ ಕೊನೆಯ ದಿನದಂದು ಬೆಳಿಗ್ಗೆ 9 ಗಂಟೆಗೆ ಸಂವಿಧಾನಕ್ಕೆ 75ವರ್ಷ ಹಿನ್ನಲೆ ವಿಶೇಷ ಭಾಷಣ -03 ನಡೆಯಲಿದ್ದು ಮೈಸೂರಿನ ಕನ್ನಡ ಪ್ರಾಧ್ಯಾಪಕ ಡಾ.ಬಿ.ವಿ.ವಸಂತಕುಮಾರ್ ಹಾಗೂ ಸಾಮಾಜಿಕ ಕಾರ್ಯಕರ್ತರಾದ ವಾದಿರಾಜ ವೇದಿಕೆಯಲ್ಲಿ ಇರಲಿದ್ದು, ಬೆಳಿಗ್ಗೆ 11 ಗಂಟೆಗೆ ಯುವ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದ್ದು, ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೋ ದಯಾನಂದ ಅಗಸರ ಮುಖ್ಯ ಅತಿಥಿಯಾಗಿ, ಹಾವೇರಿ ಪೋಲಿಸ್ ಇಲಾಖೆಯ ರಕ್ತ ಸೈನಿಕ ಕರಿಬಸಪ್ಪ ಎಂ ಗೊಂದಿ ಸಾಧಕರಾಗಿ ಆಗಮಿಸಲಿದ್ದು, ಸಂಜೆ 4:30 ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಬಸವರಾಜ ದೇಶಮುಖ, ಸಂಯೋಜಕ ಅಲ್ಲಮಪ್ರಭು ಗುಡ್ಡಾ, ಕೋಶಾಧ್ಯಕ್ಷ ದಯಾಘನ ಧಾರವಾಡಕರ್, ಸೂರ್ಯಕಾಂತ ಸೇರಿದಂತೆ ಇತರರಿದ್ದರು.
ಮೂರು ದಿನಗಳ ಕಾಲ ಶರಣರ ನಾಡಿನಲ್ಲಿ ಪರಿಷತ್ತಿನ ದೊಡ್ಡ ಹಬ್ಬ ನಡೆಯಲಿದ್ದು, ಮುಂದಿನ ಒಂದು ವರ್ಷದ ಯೋಜನೆಗಳ ಕುರಿತಾಗಿ ವಿಸ್ತೃತವಾದ ಚರ್ಚೆ ನಡೆಯಲಿದೆ. ವರ್ತಮಾನದ ಪರಿಸ್ಥಿತಿ, ಶೈಕ್ಷಣಿಕ ಸ್ಥಿತಿಗತಿ ಹಾಗೂ ವಿಶ್ವವಿದ್ಯಾಲಯಗಳ ಸ್ಥಿತಿಗತಿಯ ಬಗ್ಗೆ ಮೂರು ನಿರ್ಣಯ ತೆಗೆದುಕೊಳ್ಳಲು ಸಮಿತಿ ನಿರ್ಧರಿಸಿದೆ ಎಂದು ತಿಳಿಸಿದರು.