ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಅಡಿಯಲ್ಲಿನ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೇಂದ್ರೀಕೃತ ಹವಾನಿಯಂತ್ರಿತ (ಎಸಿ) ವ್ಯವಸ್ಥೆಯಲ್ಲಿ ಸಮಸ್ಯೆಯುಂಟಾದ ಪರಿಣಾಮ ಆರೋಗ್ಯ ಸೇವೆಯಲ್ಲಿ ತೀವ್ರ ವ್ಯತ್ಯಯವಾಗಿದೆ. ತುರ್ತು ಪ್ರಕರಣ ಹೊರತುಪಡಿಸಿ ಇತರೆ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗಿದೆ.
4-5 ದಿನಗಳಿಂದ ವಿದ್ಯುತ್ ಏರಿಳಿತವಾಗಿದ್ದು, ಇದರ ಪರಿಣಾಮ ಹವಾನಿಯಂತ್ರಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಸಮಸ್ಯೆ ಉದ್ಭವಿಸಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಂಸಿಆರ್‌ಐ ಬೆಂಗಳೂರಿನಲ್ಲಿ ಐದು ಆಸ್ಪತ್ರೆಗಳನ್ನು (ವಿಕ್ಟೋರಿಯಾ ಆಸ್ಪತ್ರೆ (1000 ಹಾಸಿಗೆಗಳು), ವಾಣಿ ವಿಲಾಸ್ ಆಸ್ಪತ್ರೆ (500 ಹಾಸಿಗೆಗಳು), ಮಿಂಟೋ ಆಸ್ಪತ್ರೆ (300 ಹಾಸಿಗೆಗಳು), ಪಿಎಂಎಸ್‌ಎಸ್‌ವೈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (200 ಹಾಸಿಗೆಗಳು), ಮತ್ತು ಟ್ರಾಮಾ ಮತ್ತು ಎಮರ್ಜೆನ್ಸಿ ಕೇರ್ ಸೆಂಟರ್ (200 ಹಾಸಿಗೆಗಳು) ) ನಿರ್ವಹಿಸುತ್ತಿದ್ದು, ಈ ಪೈಕಿ ಪಿಎಂಎಸ್‌ಎಸ್‌ವೈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಕೇಂದ್ರೀಯ ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿರುವ ಏಕೈಕ ಆಸ್ಪತ್ರೆಯಾಗಿದೆ.
ಆಸ್ಪತ್ರೆಯ ವಿಶೇಷ ಅಧಿಕಾರಿ ಡಾ.ದಿವ್ಯಪ್ರಕಾಶ್ ಮಾತನಾಡಿ, ತಾಂತ್ರಿಕ ವೈಫಲ್ಯವು ಆಸ್ಪತ್ರೆಯ ಹವಾನಿಯಂತ್ರಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ, ಇದರಿಂದ ನಿಗದಿತ ಶಸ್ತ್ರಚಿಕಿತ್ಸೆಗಳು ತಡವಾಗಿವೆ. ಎಂದು ಹೇಳಿದ್ದಾರೆ. “ಆಸ್ಪತ್ರೆಯ ತಾಂತ್ರಿಕ ತಂಡವು ಸಮಸ್ಯೆಯನ್ನು ಪರಿಹರಿಸಲು ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಹವಾನಿಯಂತ್ರಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನಃಸ್ಥಾಪಸಲಿದ್ದಾರೆ. ಒಮ್ಮೆ ವ್ಯವಸ್ಥೆಯು ಕಾರ್ಯಾರಂಭಿಸಿದ ನಂತರ, ಎಲ್ಲಾ ಶಸ್ತ್ರಚಿಕಿತ್ಸೆಗಳು ನಿಗದಿತ ಸಮಯಕ್ಕೆ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.