ಹೊಸದಿಗಂತ ವರದಿ,ಬಳ್ಳಾರಿ:
ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಲು ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಗುರುಗಳನ್ನು ಬಂಧಿಸಿದ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.
ನಗರದ ರೇಡಿಯೋ ಪಾರ್ಕ್ ಪ್ರದೇಶದ ಸರ್ಕಾರಿ ಪ್ರೌಢ ಶಾಲೆ ಮುಖ್ಯಗುರು ಅಭಿದಾ ಬೇಗಂ ಬಂಧಿತರು. ಎಸಿಬಿ ಎಸ್ಪಿ ಶ್ರೀಹರಿ ಬಾಬು ಅವರ ಮಾರ್ಗದರ್ಶನದಲ್ಲಿ ಡಿಎಸ್ಪಿ ಸೂರ್ಯನಾರಾಯಣ ರಾವ್ ಹಾಗೂ ಅವರ ತಂಡ ದಾಳಿ ನಡೆಸಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.
ಶಾಲೆಯಲ್ಲಿ ವಿಕಲಚೇತನ ಮಕ್ಕಳಿಗಾಗಿ ಶೌಚಾಲಯ ನಿರ್ಮಿಸಿದ್ದು, ಕಾಮಗಾರಿ ಪೂರ್ಣಗೊಂಡಿರುವ ಕುರಿತು ದೃಢೀಕರಣ ಪತ್ರ ನೀಡಲು ಶಾಲೆ ಮುಖ್ಯಗುರು ಅಭಿದಾ ಬೇಗಂ ಅವರು ಗುತ್ತಿಗೆದಾರ ಮಹ್ಮದ್ ಜುಲ್ಫೀಕರ್ ಎನ್ನುವವರಿಗೆ 10ಸಾವಿರ ರೂ.ಲಂಚದ ಬೇಡಿಕೆ ಇಟ್ಟಿದ್ದರು. ಒಪ್ಪಂದಂತೆ ದೂರುದಾರ ಹಣ ನೀಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ನಗರದ ಜಯನಗರ ಬಡಾವಣೆಯ ನಿವಾಸಿ, ಗುತ್ತಿಗೆದಾರ ಮಹ್ಮದ್ ಜುಲ್ಫೀಕರ್ ಅವರು ದೂರು ನೀಡಿದ್ದರು.