ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಕೋಯಿಕ್ಕೋಡಿನ ಕೊಯಿಲಾಂಡಿಯ ಕುರುವಂಗಾಡಿನ ಮಾನಕ್ಕುಲಂಗಾರ ದೇಗುಲದಲ್ಲಿ ಉತ್ಸವದ ವೇಳೆ ಆನೆಗಳೆರಡರ ನಡುವೆ ಘರ್ಷಣೆ ಉಂಟಾಗಿ ಅವು ಯದ್ವಾತದ್ವ ಓಡಿದಾಗ ಇಬ್ಬರು ವ್ಯಕ್ತಿಗಳು ಸಾವಿಗೀಡಾಗಿ, 25 ರಷ್ಟು ಮಂದಿ ಗಾಯಗೊಂಡ ಅವಘಡ ಗುರುವಾರ ನಡೆದಿದೆ.
ಮೃತರನ್ನು ಲೀಲಾ(68) ಮತ್ತು ಅಮ್ಮು ಕುಟ್ಟಿ (65)ಎಂದು ಗುರುತಿಸಲಾಗಿದ್ದು, ಇವರು ಕುರುವಂಗಾಡ್ ನಿವಾಸಿಗಳಾಗಿದ್ದಾರೆ.
ಕನಿಷ್ಠ ೨೧ ಮಂದಿ ಗಾಯಾಳುಗಳನ್ನು ಕೊಯಿಲಾಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಕೋಯಿಕ್ಕೋಡು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇಗುಲದ ಉತ್ಸವದ ವೇಳೆ ಪೀತಾಮಂಬರನ್ ಮತ್ತು ಗೋಕುಲ್ ಎಂಬ ಹೆಸರಿನ ಎರಡು ಆನೆಗಳ ನಡುವೆ ಇದ್ದಕ್ಕಿದ್ದಂತೆ ಘರ್ಷಣೆ ಉಂಟಾಗಿದೆ. ಅನಂತರ ಎರಡೂ ಆನೆಗಳನ್ನು ನಿಯಂತ್ರಣಕ್ಕೆ ತರುವ ಯತ್ನ ನಡೆದಿದ್ದು, ಈ ಸಂದರ್ಭ ಆನೆಗಳೆರಡೂ ಉತ್ಸವದಲ್ಲಿ ಪಾಲ್ಗೊಂಡಿದ್ದ ಜನರತ್ತ ಓಡಲಾರಂಬಿಸಿದವು. ಇದರಿಂದ ಭಯಭೀತರಾದ ಜನರು ದಿಕ್ಕಾಪಾಲಾಗಿ ಓಡಲಾರಂಭಿಸಿದ್ದು, ಈ ಸಂದರ್ಭ ಅವಘಡ ಸಂಭವಿಸಿದೆ. ಕೊನೆಗೂ ಮಾವುತರು ಆನೆಗಳನ್ನು ನಿಯಂತ್ರಣಕ್ಕೆ ತಂದಿದ್ದಾರೆ.