ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳ್ಳಂಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.
ಶನಿವಾರ ನಸುಕಿನ ಪ್ರಕಾಶಂ ಜಿಲ್ಲೆಯ ಜಾಮುನಾ ತರ್ಲುಪಾಡು ಮಂಡಲದ ಕಲುಜುವ್ವಳಪಾಡು ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರನ್ನು ಅಂಬಾಪುರಂನ ವಿನೋದ್, ನಾನಿ ಮತ್ತು ವೀರೇಂದ್ರ ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ತೆಲಂಗಾಣ ರಾಜ್ಯದ ಮಂಚಿರಿಯಾಲ ಜಿಲ್ಲೆಯಲ್ಲಿ ಮತ್ತೊಂದು ರಸ್ತೆ ಅಪಘಾತ ಸಂಭವಿಸಿದೆ. ಜಿಲ್ಲೆಯ ಮಂದಮರ್ರಿ ಮಂಡಲದ ಅಂದುಗುಲಪೇಟೆಯಲ್ಲಿ ಎರಡು ಲಾರಿಗಳು ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಎಪಿಯ ಅನಂತಪುರ ಜಿಲ್ಲೆಯ ನಿವಾಸಿಗಳು ಎಂದು ಪೊಲೀಸರು ಗುರುತಿಸಿದ್ದಾರೆ. ಮಹಾರಾಷ್ಟ್ರದಿಂದ ನಾಗ್ಪುರಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.