ಹೊಸದಿಗಂತ ಬೀದರ್ :
ಪ್ರಯಾಗರಾಜ್‍ಗೆ ಹೋಗಿ ಮರಳಿ ಬರುವಾಗ ಅಪಘಾತ ಸಂಭವಿಸಿ ಮೃತಪಟ್ಟವರ ಕುಟುಂಬಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಇಂದು ಭೇಟಿ ನೀಡಿ ಸಾಂತ್ವನ ಹೇಳಿದರು.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಅವರು ಸಂಪೂರ್ಣವಾಗಿ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಹೇಳಿದರು. ಹಾಗೆಯೇ ಇಬ್ಬರು ಗಾಯಾಳುಗಳ ಶಸ್ತ್ರಚಿಕಿತ್ಸೆ ನಡೆಸಬೇಕು ಎಂದು ವೈದ್ಯರಿಗೆ ತಿಳಿಸಿದರು.
ನಂತರ ಮೃತಪಟ್ಟವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮೃತರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಒಂದು ವಾರದಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು. ಮೃತ ಕುಟುಂಬಸ್ಥರು ಅತ್ಯಂತ ಕಡು ಬಡವರಿದ್ದಾರೆ. ಹಾಗಾಗಿ ಅವರಿಗೆ ಇನ್ನು ಹೆಚ್ಚಿನ ಸಹಾಯ ಬೇಕಿದ್ದಲ್ಲಿ ಮಾಡಲಾಗುವುದು. ಸರಕಾರ ಅವರ ಜೊತೆ ಇದೆ. ಇನ್ನೊಬ್ಬ ಗಾಯಾಳು ಇನ್ನು ಅಲ್ಲೇ ಇದ್ದಾರೆ. ಅವರನ್ನು ಶಿಫ್ಟ್ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಈಗಾಗಲೇ ಹೇಳಿದ್ದೇನೆ ಎಂದರು.
ಫೆ.21 ರಂದು ನಗರದ ಲಾಡಗೇರಿ ನಿವಾಸಿಗಳು ಪ್ರಯಾಗರಾಜ್‍ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಹೋಗಿ ಬರುತ್ತಿದ್ದಾಗ ವಾರಾಣಸಿ ಜಿಲ್ಲೆಯ ಮಿರ್ಜಾ ಮುರಾರ್ ಪೆÇಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ರೂಪಾಪುರ್ ಬಳಿ ಇವರು ಸಾಗುತ್ತಿದ್ದ ಕ್ರೂಸರ್ ವಾಹನ ಲಾರಿಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದರು.
ಈ ಸಂದರ್ಭದಲ್ಲಿ ಬೀದರ ತಹಸೀಲ್ದಾರ್ ಡಿ.ಜೆ. ಮಹೇತ್, ಬೀದರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ನಗರಸಭೆ ಸದಸ್ಯ ಹಣಮಂತ ಮಲ್ಕಾಪೂರೆ, ಸುನಿಲ್ ಭಾವಿಕಟ್ಟಿ, ಮುಖಂಡರಾದ ಧನರಾಜ ಹಂಗರಗಿ, ರೇಖಾ, ಚಂದ್ರಕಾಂತ ಹಳ್ಳಿಖೇಡಕರ್, ಶರಣು ಲಾಡಗೇರಿ, ರಮೇಶ ಜಮಾದಾರ್, ಜಗದೀಶ ಭಾವಿಕಟ್ಟಿ, ವಿಜಯಕುಮಾರ ಭಂಡೆ ಸೇರಿದಂತೆ ಇತರರು ಇದ್ದರು.