ಹೊಸದಿಗಂತ ವರದಿ ವಿಜಯನಗರ:
ಜಿಲ್ಲೆಯ ಹೊಸಹಳ್ಳಿ ಬಳಿ ಮಂಗಳವಾರ ಬೆಳಗಿನಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗದಗ ಜಿ.ಪಂ. ಮಾಜಿ ಅಧ್ಯಕ್ಷ ಸಿದ್ದು ಪಾಟೀಲ ಅವರ ಸಹೋದರ ಚನ್ನವೀರಗೌಡ ಪಾಟೀಲ ಸೇರಿದಂತೆ ಇಬ್ಬರು ಮೃತಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗದಗ ನಿವಾಸಿಗಳಾದ ಚನ್ನವೀರಗೌಡ ಹೊಳೆಯಪ್ಪಗೌಡ ಪಾಟೀಲ(29), ಸ್ನೇಹಿತ ಯುವರಾಜ ಕಾಶಪ್ಪ ಹೂಗಾರ್(22) ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ
ಮೃತಪಟ್ಟಿದ್ದಾರೆ.
ವೀರಣ್ಣ ಸಂಗಳದ್, ಮಂಜುನಾಥ ತಳವಾರ ಹಾಗೂ ಕಾರು ಚಾಲಕ ಚಿದಂಬರ್ ಕುಲ್ಕರ್ಣಿ ಗಂಭೀರವಾಗಿ ಗಾಯಗೊಂಡಿದ್ದು, ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗದಗದಿಂದ ಹೊಸಪೇಟೆ ಮಾರ್ಗವಾಗಿ ಚಿತ್ರದುರ್ಗದತ್ತ ತೆರಳುತ್ತಿರುವಾಗ ಹೊಸಹಳ್ಳಿ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.