ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಕಲಾವಿದರ ಸಂಘಕ್ಕೆ ರಾಜೀನಾಮೆ ನೀಡಿದ ಹಿರಿಯ ನಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲಯಾಳಂ ಹಿರಿಯ ನಟ, ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನಟಿ ರೇವತಿ ಸಂಪತ್ ಗಂಭೀರ ಆರೋಪ ಮಾಡಿದ್ದಾರೆ.

ತಾವು 21 ವರ್ಷದವಳಿದ್ದಾಗ ಈ ಘಟನೆ ನಡೆದಿರುವುದಾಗಿ ಹೇಳಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸಿದ್ದಿಕ್‌ ರಾಜೀನಾಮೆ ನೀಡಿದ್ದು, ಕೇರಳ ಚಿತ್ರರಂಗದಲ್ಲಿ ಸಂಚಲನ ಉಂಟಾಗಿದೆ.

ಹೇಮಾ ಸಮಿತಿ ವರದಿಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾಧ್ಯಮ ಸಂವಾದದ ವೇಳೆ ಮಾತನಾಡಿದ ಅವರು, ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಸಿದ್ದಿಕ್ ಮೊದಲು ತಮ್ಮನ್ನು ಮೋಲ್ ಎಂದು ಕರೆದರು. ಮೋಲ್ ಎಂಬುದನ್ನು ಕೇರಳದಲ್ಲಿ ಸಾಮಾನ್ಯವಾಗಿ ಚಿಕ್ಕ ಹುಡುಗಿ ಅಥವಾ ಮಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ ಎಂದು ತಿಳಿಸಿದರು.

ಪಿಯುಸಿ ಮುಗಿದ ಬಳಿಕ ನನಗೆ ಈ ಭಯಾನಕ ಅನುಭವವಾಗಿದೆ. ಸಿದ್ದಿಕ್ ನನಗೆ ಫೇಸ್ ಬುಕ್ ನಲ್ಲಿ ಸಂದೇಶ ಕಳುಹಿಸಿದ್ದರು. ಸಿನಿಮಾದ ಚರ್ಚೆಗೆ ಕರೆದಿದ್ದರು. ಚರ್ಚೆಯ ವೇಳೆ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈಗ ಅವರು ತೋರಿಸುವ ಮುಖ ನಾನು ಅಂದು ನೋಡಿದ ಮುಖವಲ್ಲ ಎಂದು ರೇವತಿ ಹೇಳಿದ್ದಾರೆ.

ಇತ್ತ ಸಿದ್ದಿಕ್ ಅವರು ʼಅಮ್ಮ ʼ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಭಾನುವಾರ ರಾಜೀನಾಮೆ ನೀಡಿರುವುದಾಗಿ ಅಮ್ಮಾ ಉಪಾಧ್ಯಕ್ಷ ಜಯನ್ ಚೇರ್ತಲ ಖಚಿತಪಡಿಸಿದ್ದಾರೆ.

ಸಿದ್ದಿಕ್ ಅವರನ್ನು “ಕ್ರಿಮಿನಲ್” ಎಂದು ಕರೆದ ನಟಿ ರೇವತಿ, ಸಿದ್ದಿಕ್ ತಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ತಮ್ಮ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಲ್ಲೆ ನಡೆಸಿದ ಬಳಿಕ ನಾನು ತೀವ್ರ ಮಾನಸಿಕ ಆಘಾತ ಅನುಭವಿಸಿದೆ. ಇದು ನನ್ನ ವೃತ್ತಿ ಜೀವನದ ಮೇಲೂ ಪರಿಣಾಮ ಬೀರಿದೆ. ಯಾವ ವ್ಯವಸ್ಥೆಯೂ ನನ್ನ ಬೆಂಬಲಕ್ಕೆ ನಿಂತಿರಲಿಲ್ಲ. ಮಾತನಾಡಲು ನನಗೆ ಬಹಳ ಸಮಯ ಹಿಡಿಯಿತು. ಘಟನೆಯ ಬಳಿಕ ಸಿದ್ದಿಕ್ ಏನೂ ಆಗಿಲ್ಲ ಎಂಬಂತೆ ವರ್ತಿಸಿ ನನ್ನ ಮುಂದೆ ಸಾಮಾನ್ಯ ಎಂಬಂತೆ ನಿಂತಿದ್ದರು. ಇದು ಸಾಮಾನ್ಯ ಸಂಗತಿ ಎಂಬಂತೆ ಎಲ್ಲರೂ ಪ್ರತಿಕ್ರಿಯಿಸಿದರು. ಅವರೆಲ್ಲರೂ ಇದನ್ನು ತಿಳಿದೇ ಮಾಡಿದ್ದಾರೆ ಎಂದು ಅನಿಸಿತು.

ಪರಿಸ್ಥಿತಿಯಿಂದ ಪಾರಾಗಲು ಓಡಿಹೋದೆ. ಆ ವಯಸ್ಸಿನಲ್ಲಿ ನಾನು ಸಾಧ್ಯವಾದಷ್ಟು ಉತ್ತಮವಾಗಿ ಪ್ರತಿಕ್ರಿಯಿಸಿದೆ. ನಾನು ಏನೂ ಮಾಡಲೂ ಸಾಧ್ಯವಿರಲಿಲ್ಲ. ಓಡಿಹೋಗಿ ಆಟೋ ಹತ್ತಿ ಪರಾರಿಯಾದೆ ಎಂದು ರೇವತಿ ಹೇಳಿದ್ದಾರೆ.

ಮಲಯಾಳಂ ಚಲನಚಿತ್ರೋದ್ಯಮದಲ್ಲಿನ ಕೆಲಸದ ಪರಿಸ್ಥಿತಿಗಳು ಮತ್ತು ಲೈಂಗಿಕ ಶೋಷಣೆಯ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಗೆ ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಅಮ್ಮ) ಶುಕ್ರವಾರ ಪ್ರತಿಕ್ರಿಯಿಸಿದೆ.ʼಅಮ್ಮಾʼ ವರದಿಯನ್ನು ಕೆಲವು ಬಣಗಳು ತಿರಸ್ಕರಿಸಿದ್ದು, ಕಾಸ್ಟಿಂಗ್ ಕೌಚ್ ಆರೋಪವನ್ನು ತಳ್ಳಿಹಾಕಿವೆ.

ಇತ್ತ ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ನಟ, ಸಂಸ್ಥೆಯ ಅಧ್ಯಕ್ಷ ಮೋಹನ್ ಲಾಲ್ ರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿರುವುದಾಗಿ ಹೇಳಿದರು.

ನಾನು ನನ್ನ ಅಧಿಕೃತ ರಾಜೀನಾಮೆಯನ್ನು ಸಂಸ್ಥೆಯ ಅಧ್ಯಕ್ಷ ಮೋಹನ್ ಲಾಲ್ ಅವರಿಗೆ ಸಲ್ಲಿಸಿದ್ದೇನೆ. ನನ್ನ ವಿರುದ್ಧ ಆರೋಪಗಳಿರುವುದರಿಂದ ನಾನು ಹುದ್ದೆಯಲ್ಲಿ ಮುಂದುವರಿಯದಿರಲು ನಿರ್ಧರಿಸಿ ರಾಜೀನಾಮೆ ನೀಡಿದ್ದೇನೆ ಎಂದು ಸಿದ್ದಿಕ್ ಹೇಳಿದ್ದಾರೆ.

ನಾನು ಕಳೆದ ನಾಲ್ಕು ದಶಕಗಳಿಂದ ಉದ್ಯಮದಲ್ಲಿದ್ದೇನೆ. ವರದಿಯಲ್ಲಿ ಉಲ್ಲೇಖಿಸಿರುವಂತೆ ಯಾವುದೇ ಗುಂಪು ಅಸ್ತಿತ್ವದಲ್ಲಿಲ್ಲ. ಏಕೆಂದರೆ ಇದು ಚಲನಚಿತ್ರೋದ್ಯಮ ಮತ್ತು ಅಂತಹ ಯಾವುದೇ ಗುಂಪುಗಳು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಎಲ್ಲಿಯಾದರೂ ಯಾವುದೇ ಅಪರಾಧ ನಡೆದಿದ್ದರೆ ಅದನ್ನು ತನಿಖೆ ಮಾಡಬೇಕು ಮತ್ತು ತಪ್ಪಿತಸ್ಥರಿದ್ದರೆ ಅವರನ್ನು ಬಂಧಿಸಬೇಕು ಎಂದು ನಾವು ಬಯಸುತ್ತೇವೆ. ಇದರಲ್ಲಿ ನಮಗೆ ಯಾವುದೇ ಸಂಕೋಚವಿಲ್ಲ ಎಂದು ಸಿದ್ದಿಕ್ ಹೇಳಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!