ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತದೊಳಗೆ ನುಸುಳಿ ಬಂದಿದ್ದವರಿಗೆ ನಕಲಿ ಗರುತಿನ ಚೀಟಿ ಮಾಡಿಕೊಡುತ್ತಿದ್ದ ಆರೋಪಿಯನ್ನು ಸೂರ್ಯಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅರ್ನಾಬ್ ಮಂಡಲ್ ಬಂಧಿತ ಆರೋಪಿ. ಆರೋಪಿ ಅರ್ನಾಬ್ ಮಂಡಲ್ ಮೂಲತಃ ಪಶ್ಚಿಮ ಬಂಗಾಳದವನು. ಈ ಬೆಂಗಳೂರು ಹೊರವಲಯದ ಸೂರ್ಯಸಿಟಿ ಬಳಿ ಸೈಬರ್ ಸೆಂಟರ್ ತೆರೆದಿದ್ದನು.
ಕರ್ನಾಟಕ ಪೊಲೀಸರು ರಾಜ್ಯದಲ್ಲಿ ಅಕ್ರಮವಾಗಿ ನೆಲಸಿರುವ ಬಾಂಗ್ಲಾದೇಶ ಪ್ರಜೆಗಳ ಬೆನ್ನಬಿದ್ದಿದ್ದಾರೆ. ಈಗಾಗಲೇ ಅನೇಕರ ಹೆಡೆಮುರಿ ಕಟ್ಟುತ್ತಿದ್ದಾರೆ. ಈ ಎಲ್ಲ ಬಾಂಗ್ಲಾದೇಶ ಪ್ರಜೆಗಳ ಬಳಿ ಭಾರತದ ನಕಲಿ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಮತ್ತು ಈ ಎಲ್ಲ ನಕಲಿ ಗುರುತಿನ ಚೀಟಿಗಳು ಪಶ್ಚಿಮ ಬಂಗಾಳ ವಿಳಾಸದ್ದಾಗಿವೆ.
ಈ ಬಗ್ಗೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿ, ತನಿಖೆ ಆರಂಭಿಸಿದಾಗ, ಆರೋಪಿ ಅರ್ನಾಬ್ ಮಂಡಲ್ ಸೈಬರ್ ಸೆಂಟರ್ನಲ್ಲಿ ನಡೆಯುತ್ತಿರುವ ಅಕ್ರಮ ದಂಧೆ ಬಗ್ಗೆ ತಿಳಿದಿದೆ. ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ಗುರುವಾರ ಸೈಬರ್ ಸೆಂಟರ್ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಸಾಕಷ್ಟು ನಕಲಿ ಆಧಾರ್ ಕಾರ್ಡ್ ಪತ್ತೆಯಾಗಿವೆ. ಹಾಗೆಯೇ 18 ಮನೆಗಳ ಬಾಡಿಗೆ ಅಗ್ರಿಮೆಂಟ್ ಪತ್ತೆಯಾಗಿವೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಅರ್ನಾಬ್ ಮಂಡಲ್ 8 ಸಾವಿರ ರೂ.ಗೆ ನಕಲಿ ಗುರುತಿನ ಚೀಟಿಗಳನ್ನು ಮಾಡಿಕೊಡುತ್ತಿರುವುದಾಗಿ ಬಾಯಿಬಿಟ್ಟಿದ್ದಾನೆ.