January 30, 2026
Friday, January 30, 2026
spot_img

32 ವರ್ಷಗಳ ಬಳಿಕ ಸಿಕ್ಕಿಬಿದ್ದ ಆರೋಪಿ: ಪಾದಚಾರಿ ಮೇಲೆ ಲಾರಿ ಹರಿಸಿ ಕೊಂದಿದ್ದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಾದಚಾರಿ ಮೇಲೆ ಲಾರಿ ಹತ್ತಿಸಿ ಸಾವಿಗೆ ಕಾರಣನಾಗಿದ್ದ ಆರೋಪಿಯೋರ್ವನನ್ನು 32 ವರ್ಷಗಳ ಬಳಿಕ ಜಗಳೂರು ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸನ ಜಿಲ್ಲೆಯ ಅರಸಿಕೆರೆಯ ನಿವಾಸಿ ಗಂಗಾಧರಪ್ಪ (67) ಬಂಧಿತ ಆರೋಪಿ.

1994ರಲ್ಲಿ‌‌ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಲ್ಲೇದೇವರಪುರ ಗ್ರಾಮದ ಸಮೀಪದ ಹಳೆಯ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಈ ಘಟನೆ ನಡೆದಿತ್ತು. ಅಪಘಾತದ ಬಳಿಕ ಆರೋಪಿ ಗಂಗಾಧರಪ್ಪ ತಲೆಮರೆಸಿಕೊಂಡಿದ್ದ.

ರಾಷ್ಟ್ರೀಯ ಹೆದ್ದಾರಿ 13ರಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಲಾರಿ ಹರಿದಿತ್ತು. ಅಪಘಾತದಲ್ಲಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಆರೋಪಿಯಾದ ಗಂಗಾಧರಪ್ಪ 1994ರಿಂದ ಅಲ್ಲಿ-ಇಲ್ಲಿ ಓಡಾಡಿಕೊಂಡು ತಲೆಮರೆಸಿಕೊಂಡಿದ್ದ. ಇದೀಗ ಜಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಠಾಣೆಯ ಸಿಪಿಐ ಸಿದ್ರಾಮಯ್ಯ ಅವರ ಮಾರ್ಗದರ್ಶನದಲ್ಲಿ ಎಎಸ್‌ಐ ವೆಂಕಟೇಶ್ ಜಿ.ಟಿ. ಅವರು ಮೂರು ದಶಕಗಳ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಮಂಗನ ಜ್ವರಕ್ಕೆ ಈ ವರ್ಷದ ಮೊದಲ ಸಾವು, ಶಿವಮೊಗ್ಗದ ಯುವಕ ಬಲಿ!

ಆರೋಪಿಯ ಪತ್ತೆಗಾಗಿ ಪೊಲೀಸರು ಈ ಹಿಂದೆ ಸಾಕಷ್ಟು ಪ್ರಯತ್ನ ನಡೆಸಿದ್ದರೂ ಸಿಕ್ಕಿರಲಿಲ್ಲ. ನಿರಂತರ ಹುಡುಕಾಟದ ಬಳಿಕ ಆರೋಪಿಯನ್ನು ಕೊನೆಗೂ ಬಂಧಿಸಿದ್ದೇವೆ ಎಂದು ಜಗಳೂರು ಠಾಣೆಯ ಪಿಐ ಸಿದ್ರಾಮಯ್ಯ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಬಂಧಿತ ಆರೋಪಿಯನ್ನು ಜಗಳೂರಿನ ಸಿವಿಲ್ ಮತ್ತು ಜೆಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !