ಹೊಸದಿಗಂತ ವಿಜಯಪುರ:
ಜಿಲ್ಲೆಯಲ್ಲಿ ಕಂಟ್ರಿ ಪಿಸ್ತೂಲ್ ಗಳನ್ನು ಇಟ್ಟಿಕೊಂಡಿದ್ದವರ ಮೇಲೆ ದಾಳಿ ನಡೆಸಿ, 10 ಕಂಟ್ರಿ ಪಿಸ್ತೂಲ್, 24 ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಂಟ್ರಿ ಪಿಸ್ತೂಲ್ ಇಟ್ಟುಕೊಂಡಿದ್ದ ಪ್ರಕರಣಕ್ಕೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯ ಆರೋಪಿಗಳ ಬಂಧನ ಮಾಡಲಾಗಿದೆ ಎಂದರು.
ಇತ್ತೀಚೆಗೆ ರಮೇಶ ಗೇಮು ಲಮಾಣಿ ಹಾಗೂ ಇತರರು ಸೇರಿ ಸತೀಶ ಪ್ರೇಮಸಿಂಗ್ ರಾಠೋಡ ಈತನ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗಿದ್ದು, ಒಟ್ಟು 6 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದ 5 ನೇ ಆರೋಪಿ, ಹಂಚನಾಳ ಎಲ್ ಟಿ ನಂ.1 ರ ಸಾಗರ ಉರ್ಫ್ ಸುರೇಶ ರಾಠೋಡ ಈತ, ರಮೇಶ ಗೇಮು ಲಮಾಣಿಗೆ ಅಕ್ರಮ ಪಿಸ್ತೂಲ್‌ನ್ನು ಪೂರೈಕೆ ಮಾಡಿದ್ದ, ಈ ಮಾಹಿತಿ ಆಧರಿಸಿ, ವಿಜಯಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈತನಿಂದ ಅಕ್ರಮವಾಗಿ ಪಿಸ್ತೂಲ್‌ಗಳನ್ನು ಪಡೆದವರ ಮೇಲೆ ದಾಳಿ ಮಾಡಿ ಒಟ್ಟು 10 ಕಂಟ್ರಿ ಪಿಸ್ತೂಲ್‌ಗಳು ಹಾಗೂ 24 ಜೀವಂತ ಗುಂಡುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.
ಆರೋಪಿಗಳಾದ ಹಂಚಿನಾಳ ತಾಂಡಾದ ಪ್ರಕಾಶ ಮರ್ಕಿಯಿಂದ ಪಿಸ್ತೂಲ್ 1, ಜೀವಂತ ಗುಂಡು 3,
ಇಲ್ಲಿನ ಕರಾಡ ದೊಡ್ಡಿಯ ಅಶೋಕ ಪರಮು ಪಾಂಡ್ರೆಯಿಂದ ಪಿಸ್ತೂಲ್ 1, ಜೀವಂತ ಗುಂಡು 2, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ತುಳಜಾಪುರ ತಾಲೂಕಿನ ಕಡಕಿ ತಾಂಡಾದ ಸುಜಿತ ಸುಭಾಸ ರಾಠೋಡನಿಂದ ಪಿಸ್ತೂಲ್ 1, ಸಜೀವ ಗುಂಡು 1, ವಿಜಯಪುರ ಸಾಯಿ ಪಾರ್ಕ್ ನಿವಾಸಿ ಸುಖದೇವ ಉರ್ಫ್ ಸುಖಿ ನರಸು ರಾಠೋಡನಿಂದ ಪಿಸ್ತೂಲ್ 1, ಸಜೀವ ಗುಂಡು 5, ಸಿಂದಗಿಯ ನಾಗಾವಿ ತಾಂಡಾದ ಪ್ರಕಾಶ ಭೀಮಸಿಂಗ್ ರಾಠೋಡನಿಂದ ಪಿಸ್ತೂಲ್ 1, ಜೀವಂತ ಗುಂಡು 1, ಬಸವನಬಾಗೇವಾಡಿಯ ಗಣೇಶ ಶಿವರಾಮ ಶೆಟ್ಟಿ ಈತನಿಂದ ಪಿಸ್ತೂಲ್ 1, ಸಜೀವ ಗುಂಡು 4, ಚನ್ನಪ್ಪ ಮಲ್ಲಪ್ಪ ನಾಗನೂರ ಪಿಸ್ತೂಲ್ 1, ಸಜೀವ ಗುಂಡು 4, ಸಂತೋಷ ಕಿಶನ್ ರಾಠೋಡ ಪಿಸ್ತೂಲ್ 1, ಸಜೀವ ಗುಂಡು 4, ಸಾಂಗ್ಲಿ ಐತವಾಡೆಯ ಜನಾರ್ಧನ ವಸಂತ ಪವಾರ ಪಿಸ್ತೂಲ್ 1, ಸಾಗರ ಉರ್ಫ್ ಸುರೇಶ ರಾಠೋಡ ಪಿಸ್ತೂಲ್ 1 ಹೀಗೆ ಒಟ್ಟು 10 ಪಿಸ್ತೂಲ್‌ಗಳು ಹಾಗೂ 24 ಸಜೀವ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.