ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬಿನಂಶ ಪತ್ತೆ ಆರೋಪ: ಸರ್ಕಾರಕ್ಕೆ 40 ಪುಟಗಳ ವರದಿ ಸಲ್ಲಿಸಿದ ಟಿಟಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಮಿಶ್ರಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಅಧಿಕಾರಿ ಜೆ. ಶ್ಯಾಮಲಾ ಅವರಿಂದ ಸರ್ಕಾರಕ್ಕೆ 40 ಪುಟಗಳ ವರದಿ ಸಲ್ಲಿಸಲಾಗಿದೆ.

ವೈಎಸ್‌ಆರ್‌ಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ದೇವಸ್ಥಾನದ ಲಡ್ಡುಗಳ ತಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಲಾಗಿದೆ ಎಂಬ ವಿವಾದದ ಬೆನ್ನಲ್ಲೇ ಪ್ರಕರಣವನ್ನು ತನಿಖೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಅಲ್ಲದೇ ಪ್ರಕರಣದ ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಟಿಡಿಪಿ ಹೇಳಿಕೆ ನೀಡಿತ್ತು. ಇದೀಗ ಸರ್ಕಾರಕ್ಕೆ ಟಿಟಿಡಿ 40 ಪುಟಗಳ ವರದಿ ಸಲ್ಲಿಸಿದೆ.

ತಿರುಮಲ ಮತ್ತು ತಿರುಚನೂರು ದೇಗುಲಗಳಲ್ಲಿ ಲಾಡು ಮತ್ತು ಇತರ ಪ್ರಸಾದಗಳನ್ನು ಸಿದ್ಧಪಡಿಸಲು ಆರು ತಿಂಗಳಿಗೊಮ್ಮೆ ಅಗ್‌ಮಾರ್ಕ್ ಗುರುತು ಹೊಂದಿರುವ ಹಸುವಿನ ತುಪ್ಪವನ್ನು ಇ-ಟೆಂಡರ್ ಮೂಲಕ ಖರೀದಿಸಲಾಗುತ್ತದೆ. ಟಿಟಿಡಿ ಮತ್ತು ಎಫ್‌ಎಸ್‌ಎಸ್‌ಎಐ ಮಾನದಂಡಗಳ ಪ್ರಕಾರ ತುಪ್ಪ ಗುಣಮಟ್ಟ ಹೊಂದಿರಬೇಕು ಎಂದು ಟೆಂಡರ್‌ನಲ್ಲಿ ಹೇಳಲಾಗಿರುತ್ತದೆ.

ದಿನಕ್ಕೆ 15 ಸಾವಿರ ಕೆ.ಜಿಯಂತೆ ವಾರ್ಷಿಕ ಸುಮಾರು 200 ಕೋಟಿ ರೂ. ಮೌಲ್ಯದ ತುಪ್ಪ ಖರೀದಿಗೆ ಟೆಂಡರ್ ಕರೆಯಲಾಗುತ್ತದೆ. ನಿರ್ದಿಷ್ಟ ಮಾನದಂಡಗಳನ್ನು ನಿಗದಿ ಮಾಡಲಾಗಿದೆಯಾದರೂ, ಅವುಗಳ ಪರೀಕ್ಷೆಗೆ ಅಗತ್ಯವಿರುವ ಸಾಧನಗಳು ಟಿಟಿಡಿಯ ಪ್ರಯೋಗಾಲಯದಲ್ಲಿಲ್ಲ. ಹೀಗಾಗಿ ಕಲಬೆರಕೆ ಕುರಿತು ಪರೀಕ್ಷೆಗಳನ್ನು ನಡೆಸಲಾಗುತ್ತಿಲ್ಲ. ಗುತ್ತಿಗೆದಾರರು ಟ್ಯಾಂಕರ್‌ಗಳಲ್ಲಿ ಕಳುಹಿಸಿದ ತುಪ್ಪದ ತೇವಾಂಶ, ಕೊಬ್ಬಿನಾಮ್ಲ, ಮಿಶ್ರಿತ ಬಣ್ಣ, ಕರಗುವ ಬಿಂದು ಸೇರಿದಂತೆ ಕೆಲ ಮೂಲ ಪರೀಕ್ಷೆಗಳನ್ನಷ್ಟೇ ಮಾಡಲಾಗುತ್ತದೆ. ಈ ವೇಳೆ ಏನಾದರೂ ವ್ಯತ್ಯಾಸ ಕಂಡು ಬಂದರೆ, ಆ ಟ್ಯಾಂಕರ್‌ಗಳ ತುಪ್ಪವನ್ನು ತಿರಸ್ಕರಿಸಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!