ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಯಿಕ್ಕೋಡ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ಬಿಜೆಪಿ ಮುಖಂಡ , ನಟ ಸುರೇಶ್ ಗೋಪಿ ಕ್ಷಮೆಯಾಚಿಸಿದ್ದಾರೆ.
ನಟ ಸುರೇಶ್ ಗೋಪಿ ವಿರುದ್ಧ ಮಹಿಳಾ ಪತ್ರಕರ್ತೆ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.
ಕೋಯಿಕ್ಕೋಡ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಸುರೇಶ್ ಗೋಪಿ ಅವರು ಮಹಿಳಾ ಪತ್ರಕರ್ತೆ ವಿರುದ್ಧ ಅನುಚಿತವಾಗಿ ವರ್ತಿಸಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ. ಪ್ರಶ್ನೆ ಕೇಳಿದ ಪತ್ರಕರ್ತೆಯ ಭುಜದ ಮೇಲೆ ಸುರೇಶ್ ಗೋಪಿ ಕೈ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟ (The Kerala Union of Working Journalists)ವು, ಶುಕ್ರವಾರದಂದು ಪತ್ರಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ನಟ, ರಾಜಕಾರಣಿ ಸುರೇಶ್ ಗೋಪಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.
ಆನ್‌ಲೈನ್‌ನಲ್ಲಿ ಈ ಸಂಬಂಧ ವಿಡಿಯೋಗಳು ವೈರಲ್ ಆಗುತ್ತಿದೆ. ಪತ್ರಕರ್ತೆಯ ಪ್ರಶ್ನೆ ಸುರೇಶ್ ಗೋಪಿ ಅವರಿಗೆ ಹಿಡಿಸಿಲ್ಲ. ಆಗ ಅವರು ಪತ್ರಕರ್ತೆ ಭುಜದ ಮೇಲೆ ತಮ್ಮ ಕೈ ಇರಿಸಿದ್ದಾರೆ. ಪತ್ರಕರ್ತೆ ಎರಡು ಬಾರಿ ನಟನ ಕೈಯನ್ನು ಸರಿಸಿದ್ದಾರೆ. ಪದೇ ಪದೆ ಅವರ ಕೈಯನ್ನು ತಮ್ಮ ಭುಜದಿಂದ ದೂರ ತಳ್ಳಿದ್ದಾರೆ ಎಂಬುದು ವೈರಲ್ ವಿಡಿಯೋಗಳಲ್ಲಿ ಸ್ಪಷ್ಟವಾಗಿದೆ ಎಂದು ಒಕ್ಕೂಟ ತಿಳಿಸಿದೆ.
ಸುರೇಶ್ ಗೋಪಿ ಕ್ಷಮೆಯಾಚನೆ:
ಈ ಬೆಳವಣಿಗೆಗಳ ಬಳಿಕ ಸುರೇಶ್ ಗೋಪಿ ತಮ್ಮ ಫೇಸ್ ಬುಕ್ ಖಾತೆ ಮೂಲಕ ಕ್ಷಮೆಯಾಚಿಸಿದ್ದಾರೆ. ಪತ್ರಕರ್ತರನ್ನು ಪ್ರೀತಿಯಿಂದ ನಡೆಸಿಕೊಂಡಿದ್ದು, ಮಗುವಿಗೆ ಯಾವುದೇ ರೀತಿಯ ನೋವಾಗಿದ್ದರೆ ಅಥವಾ ಮಾನಸಿಕ ತೊಂದರೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಸುರೇಶ್ ಗೋಪಿ ತಮ್ಮ ಅಧಿಕೃತ ಫೇಸ್ ಬುಕ್ನಲ್ಲಿ ಬರೆದುಕೊಂಡಿದ್ದಾರೆ.