ತುಳು ಸಂಸ್ಕೃತಿ, ದಾಸ ಸಾಹಿತ್ಯ ಚಾಪ್ಟರ್ ಬೋಧಿಸದ ಆರೋಪ: ಅನ್ಯಧರ್ಮೀಯ ಶಿಕ್ಷಕಿ ವಿರುದ್ಧ ಪೋಷಕರು, ಸಂಘಟನೆಗಳು ಗರಂ!

ಹೊಸದಿಗಂತ ವರದಿ, ಮಂಗಳೂರು/ಪಡುಬಿದ್ರಿ:

ಉಡುಪಿ ಜಿಲ್ಲೆ ಕಾಪು ತಾಲೂಕಿನ ದಂಡತೀರ್ಥ ಎಂಬಲ್ಲಿನ ಶಾಲೆಯೊಂದರಲ್ಲಿ 7ನೇ ತರಗತಿಯ ಸಮಾಜ ಪಠ್ಯದಲ್ಲಿನ ಭಾಗ 7 ಮತ್ತು ಭಾಗ 8ರ ತುಳುನಾಡಿನ ಹಾಗೂ ಹಿಂದು ಧಾರ್ಮಿಕತೆಗೆ ಸಂಬಂಧಪಟ್ಟ ವಿಷಯಗಳನ್ನು ಪಾಠ ಮಾಡಲಿಲ್ಲ ಎಂದು ಆರೋಪಿಸಿ ಅನ್ಯಧರ್ಮದ ಶಿಕ್ಷಕಿಯ ವಿರುದ್ಧ ವಿದ್ಯಾರ್ಥಿ ಹಾಗೂ ಪೋಷಕರು ಸಹಿತ ಹಿಂದು ಸಂಘಟನೆಗಳು ಆಕ್ರೋಶವನ್ನು ವ್ಯಕ್ತಪಡಿಸಿದ ಘಟನೆ ನಡೆದಿದೆ.

ಈ ಬಗ್ಗೆ ಶಾಲಾಡಳಿತವನ್ನು ಪೋಷಕರು, ಕೆಲ ಮುಖಂಡರು ಪ್ರಶ್ನಿಸಿದ್ದು, ತುಳುನಾಡು, ಕೊಡಗು ತಲಕಾವೇರಿ ಮೂಡಬಿದ್ರಿಯ ಸಾವಿರ ಕಂಬದ ಬಸದಿ, ಕದ್ರಿ ಮಂಜುನಾಥ ಮತ್ತು ತುಳಸಿದಾಸರ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಪಠ್ಯಗಳನ್ನು ಕೈ ಬಿಟ್ಟಿದ್ದಾರೆ ಎಂದು 7ನೇ ತರಗತಿ ವಿದ್ಯಾರ್ಥಿ ಆರೋಪಿಸಿದ್ದು, ಇತರೇ ಧರ್ಮಗಳ ಪಾಠವನ್ನು ನಡೆಸಿದ್ದಾರೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾನೆ.

ಈ ಬಗ್ಗೆ 7ನೇ ತರಗತಿಯ ವಿದ್ಯಾರ್ಥಿಗಳ ಕೆಲ ಪೋಷಕರುಗಳು ಶಾಲೆಯ ಆಡಳಿತ ಮಂಡಳಿ ಜೊತೆ ಚರ್ಚೆ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ಹಿಂದು ಧರ್ಮಕ್ಕೆ ಸಂಬಂಧಿಸಿದ ಪಾಠಗಳನ್ನು ಕೈಬಿಟ್ಟಿದ್ದಾರೆ ಎಂಬುದು ವಿದ್ಯಾರ್ಥಿಯ ಹಾಗೂ ಪೋಷಕರ ಆರೋಪವಾಗಿದೆ.

ಪೋಷಕರು ಶಾಲಾಡಳಿತ ಮಂಡಳಿಯ ಜೊತೆ ಸಭೆ ನಡೆಸುತ್ತಿದ್ದಂತೆ, ಹಿಂದು ಸಂಘಟನೆ ಕಾರ್ಯಕರ್ತರು ಶಾಲಾ ವಠಾರದಲ್ಲಿ ಜಮಾವಣೆಗೊಂಡಿದ್ದರು. ಪಠ್ಯ ಕೈಬಿಟ್ಟ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಶಾಲೆಗೆ ಕಾಪು ಡಿಡಿಪಿಐ ಬಂದು ಮಾಹಿತಿಯನ್ನು ಪಡೆದುಕೊಂಡರು. ಕಾಪು ಪೊಲೀಸರೂ ಶಾಲೆಯಲ್ಲಿ ಕಂಡು ಬಂದಿದ್ದು, ಇದು ಉದ್ದೇಶಪೂರ್ವಕ ಕೃತ್ಯವಲ್ಲ ಎಂದು ಶಾಲಾಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಮಳೆಗಾಲದ ರಜೆ ಇದ್ದ ಕಾರಣ ಪಾಠವನ್ನು ಮಧ್ಯಾವಧಿ ಪರೀಕ್ಷೆಯ ನಂತರ ನಡೆಸಲು ಯೋಜಿಸಲಾಗಿತ್ತು. ಸಿಲೆಬಸ್‌ನಲ್ಲಿರುವ ಪಾಠ ಕೈ ಬಿಡುವ ಪ್ರಶ್ನೆ ಇಲ್ಲ, ಹೆಚ್ಚುವರಿ ತರಗತಿ ಮಾಡಿ ಪಾಠ ಮಾಡುತ್ತೇವೆ. ಸಮಾಜ ಶಿಕ್ಷಕಿಯಿಂದ ಈ ಬಗ್ಗೆ ಸ್ಪಷ್ಟನೆ ಪಡೆಯುವುದಾಗಿ ಶಾಲೆಯ ಮುಖ್ಯಸ್ಥರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಮತೀಯ ಭಾವನೆಯುಳ್ಳ ಶಿಕ್ಷಕಿ, ಹಿಂದುಗಳ ಹಾಗೂ ಇತಿಹಾಸಕ್ಕೆ ಸಂಬಂಧಪಟ್ಟ ಪಠ್ಯವನ್ನು ಬೋಧಿಸದೆ ಪ್ರಶ್ನೆ ಬದಲಾಯಿಸಿ ಪರೀಕ್ಷೆಗೆ ನೀಡುತ್ತೇವೆ ಎನ್ನುವ ಇಂತಹ ಶಿಕ್ಷಕಿಯ ವಿರುದ್ಧ ಸೂಕ್ತ ಕ್ರಮ ಆಗಬೇಕು ಎಂದು ವಿಶ್ವಹಿಂದೂ ಪರಿಷದ್, ಭಜರಂಗದಳ, ಹಿಂದೂ ಜಾಗರಣಾ ವೇದಿಕೆ, ಅನ್ಯ ಜಾಗೃತ ಹಿಂದೂ ಸಮಾಜದ ಬಂಧುಗಳು ಈ ಬಗ್ಗೆ ಆಡಳಿತ ಸಮಿತಿಯಲ್ಲಿ ಸ್ಪಷ್ಟನೆ ಕೇಳುವ ಕೆಲಸವನ್ನು ಮಾಡಿದ್ದು, ಆಡಳಿತ ಮಂಡಳಿ ಸ್ಪಂದಿಸಿದ್ದು, ಅಂತಹ ಶಿಕ್ಷಕಿಯನ್ನು ಅಮಾನತು ಮಾಡುವ ಭರವಸೆಯನ್ನು ಹಿಂದು ಸಂಘಟನೆಗಳಿಗೆ ನೀಡಿದೆ ಎಂದು ಪ್ರಮುಖರು ಮಾಧ್ಯಮಕ್ಕೆ ಸ್ಪಷ್ಟಪಡಿಸಿದ್ದಾರೆ.

 

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

2 COMMENTS

  1. ಪಠ್ಯ ವಿಷಯವ ಕೈ ಬಿಡುವ ಅಧಿಕಾರವನ್ನು ಶಿಕ್ಷಕಿಗಾರು ನೀಡಿದರು?

  2. ಹೆಚ್ಚುತ್ತಿರುವ ಹಿಂದೂ ವಿರೋಧಿ ನೀತಿ ಇದರ ಹಿಂದಿರುವ ಕೈ ಯಾವುದು, ಈ ಸರಕಾರ ರಾಜ್ಯದಲ್ಲಿ ಬಂದ ಮೇಲೆ ಹೆಚ್ಚುತ್ತಿರುವ ಇಂತಹ ಘಟನೆಗಳು

LEAVE A REPLY

Please enter your comment!
Please enter your name here

error: Content is protected !!