ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೈಬರ್ ವಂಚಕರ ಜಾಲ ಮಲಯಾಳಂ ಚಿತ್ರ ನಟಿ ಮಾಲಾ ಪಾರ್ವತಿಯನ್ನು ಬಲೆಗೆ ಕೆಡವಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
ಮುಂಬೈ ಪೊಲೀಸರ ಹೆಸರಿನಲ್ಲಿ ವಂಚಕರು ಕರೆಮಾಡುತ್ತಿದ್ದಂತೆಯೇ ತಕ್ಷಣ ಅಲರ್ಟ್ ಆದ ನಟಿ, ‘ಪೊಲೀಸರ’ ಖಾತೆಯನ್ನೇ ಸ್ಥಗಿತಗೊಳಿಸಿ ತಿರುಗೇಟು ನೀಡಿದ್ದಾರೆ!
ಇಷ್ಟಕ್ಕೂ ನಡೆದಿದ್ದೇನು?
ಸಿನೆಮಾ ಶೂಟಿಂಗ್ ಮುಗಿಸಿ ತಡರಾತ್ರಿ ಬಂದಿದ್ದ ಮಾಲಾ ಪಾರ್ವತಿಗೆ ಅನಾಮಿಕನೋರ್ವ ಕರೆ ಮಾಡಿ, ತಾನು ವಿಕ್ರಮ್ ಸಿಂಗ್, ಮುಂಬೈ ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದ. ತಮ್ಮ ಹೆಸರಿನಲ್ಲಿ ಕೊರಿಯರ್ ಐದು ಪಾಸ್ ಪೋರ್ಟ್‌ಗಳು, ಮೂರು ಬ್ಯಾಂಕ್ ಕ್ರೆಡಿಟ್ ಕಾರ್ಡ್, ಲ್ಯಾಪ್‌ಟಾಪ್ ಮತ್ತು 200 ಗ್ರಾಂ ಎಂಡಿಎಂಎ ಇದೆ ಇವುಗಳನ್ನು ತೈವಾನ್‌ಗೆ ಅಕ್ರಮವಾಗಿ ಸಾಗಿಸಿದ್ದೀರಿ ಎಂದು ಹೇಳಿದ್ದು, ಕ್ಷಣ ಕಾಲ ಆತಂಕಕ್ಕೆ ಒಳಗಾದ ನಟಿ, ಬಳಿಕ ವಾಸ್ತವ ಅರಿತುಕೊಂಡು ಪೊಲೀಸ್ ಎಂಬುದಕ್ಕೆ ದಾಖಲೆ ಕೇಳಿದ್ದಾರೆ.
ಈ ವೇಳೆ ಸಿಂಗ್ ದಾಖಲೆಯಾಗಿ ಜಾಲತಾಣದ ಮೂಲಕ ಗುರುತುಚೀಟಿ ಕಳುಹಿಸಿಕೊಟ್ಟಿದ್ದ. ಇದನ್ನು ನಟಿ ನಂಬಿದರಾದರೂ ಈ ವೇಳೆ ಗುರತು ಚೀಟಿಯಲ್ಲಿನ ಸರ್ಕಾರಿ ಲಾಂಛನದಲ್ಲಿ ಅಶೋಕ ಸ್ತಂಭ ಇಲ್ಲದಿರುವುದು ಅವರ ಮ್ಯಾನೇಜರ್ ಗಮನಕ್ಕೆ ಬಂದಿದೆ. ತಕ್ಷಣ ನಟಿ ಕಾರ್ಯನಿರ್ವಾಹಕ ನಿರ್ಮಾಪಕರಿಗೆ ಪೋನ್ ಹಸ್ತಾಂತರಿಸಿದ್ದು, ಖಾತೆಯನ್ನೇ ಸ್ಥಗಿತಗೊಳಿಸಿ ‘ಪೊಲೀಸ್’ ಕೇಸ್ ಕ್ಲೋಸ್ ಮಾಡಿದ್ದಾರೆ!
ಇದೊಂದು ಸೈಬರ್ ವಂಚಕರ ಜಾಲ ಎಂಬುದು ಅರಿವಾಯಿತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗುವುದು ಎಂದು ನಟಿ ಹೇಳಿದ್ದಾರೆ.