ವೈಟ್‌ ಹೌಸ್‌ ನಿಂದ ದಾಖಲೆ ಕದ್ದ ಆರೋಪ: ಡೊನಾಲ್ಡ್‌ ಟ್ರಂಪ್‌ ನಿವಾಸದ ಮೇಲೆ ಎಫ್‌ಬಿಐ ದಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಶಾಕ್ ನೀಡಿದ್ದು, ಅವರ ಮನೆ ಮೇಲೆದಾಳಿ ನಡೆಸಿದೆ.

ಮಾಧ್ಯಮ ವರದಿಗಳ ಪ್ರಕಾರ, ಪರಮಾಣು ದಾಖಲೆಗಳು ಮತ್ತು ಇತರ ಪ್ರಮುಖ ವಿಷಯಗಳಿಗಾಗಿ ಹುಡುಕಾಟ ನಡೆಸಲಾಗಿದೆ. ಈ ವೇಳೆ ಅಲ್ಲಿಂದ ಸುಮಾರು 12 ಬಾಕ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದಾಗ್ಯೂ, ಎಫ್‌ಬಿಐ ಏಜೆಂಟ್‌ಗಳು ಯಾವುದೇ ಪರಮಾಣು ದಾಖಲೆಗಳನ್ನು ಕಂಡುಕೊಂಡಿದ್ದಾರೆಯೇ ಎಂಬ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಮಾಜಿ ಅಧ್ಯಕ್ಷ ಟ್ರಂಪ್ ಅವರ ಐಷಾರಾಮಿ ಪಾಮ್ ಹೌಸ್ ಮತ್ತು ಮಾರ್-ಎ-ಲಿಗೊ ರೆಸಾರ್ಟ್ ಮೇಲೆ ಎಫ್‌ಬಿಐ ದಾಳಿ ನಡೆಸಿದೆ. ಯಾವುದೇ ಸೂಚನೆ ನೀಡದೆ ಈ ದಾಳಿ ನಡೆಸಲಾಗಿದೆ ಎಂದು ಟ್ರಂಪ್ ಅವರ ಇಬ್ಬರು ಆಪ್ತರು ಹೇಳಿದ್ದಾರೆ. ಇನ್ನು ದಾಳಿ ವೇಳೆ ಟ್ರಂಪ್ ಅಲ್ಲಿರಲಿಲ್ಲ.

ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದಾಳಿಯ ಬಗ್ಗೆ ಸ್ವಲ್ಪ ಮಾಹಿತಿ ನೀಡಿದರು. ಆದಾಗ್ಯೂ, ದಾಳಿಯ ನಂತರ ಎಫ್‌ಬಿಐ ಮೇಲೆ ಮಾಡಲಾಗುತ್ತಿರುವ ಟೀಕೆಯನ್ನು ಅವರು ಖಂಡಿಸಿದರು.

ಈ ವೇಳೆ ಅವರು ಟ್ರಂಪ್‌ ಅವರ ಮನೆಯಿಂದ ಹೊರ ತಂದ ಬಾಕ್ಸ್‌ನಲ್ಲಿ ಕೆಂಪು ಗುರುತನ್ನು ಹಾಕಲು ಕಾರಣವೇನು ಅನ್ನೋದನ್ನೂ ಹೇಳಿಲ್ಲ. ಅಟಾರ್ನಿ ಜನರಲ್ ಅವರು ಸರ್ಚ್ ವಾರೆಂಟ್ ಅನ್ನು ವೈಯಕ್ತಿಕವಾಗಿ ಅನುಮೋದಿಸಿದ್ದಾಗಿ ಹೇಳಿದ್ದಾರೆ. ಮಾಜಿ ಅಧ್ಯಕ್ಷರ ಮೇಲೆ ತೆಗೆದುಕೊಂಡ ಕ್ರಮದ ನಂತರ, ರಿಪಬ್ಲಿಕನ್ ಪಕ್ಷದ ಜನರು ಎಫ್‌ಬಿಐ ಅನ್ನು ಖಂಡಿಸುತ್ತಿದ್ದಾರೆ.

ಕಳೆದ ವರ್ಷ ಶ್ವೇತಭವನದಿಂದ ಹೊರಬರುವಾಗ ಟ್ರಂಪ್ ತಮ್ಮೊಂದಿಗೆ ಹಲವು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪವಿದೆ. ಈ ದಾಖಲೆಗಳನ್ನು 15 ದೊಡ್ಡ ಪೆಟ್ಟಿಗೆಗಳಲ್ಲಿ ಮಾರ್-ಎ-ಲಿಗೋಗೆ ತೆಗೆದುಕೊಂಡು ಹೋಗಲಾಯಿತು. ಅಂದಿನಿಂದ, ಅಮೆರಿಕದ ಗುಪ್ತಚರ ಸಂಸ್ಥೆಗಳು ಟ್ರಂಪ್ ಮತ್ತು ಅವರ ನಿಕಟವರ್ತಿಗಳ ಮೇಲೆ ಕಣ್ಣಿಟ್ಟಿದ್ದವು. ಆದಾಗ್ಯೂ, ಎಫ್‌ಐಬಿ ಈವರೆಗೂ ಈ ಆರೋಪದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ದೇಶದ ಕರಾಳ ದಿನ
ಅಮೆರಿಕದ ಮಾಜಿ ಅಧ್ಯಕ್ಷರ ನಿವಾಸದ ಮೇಲೆ ಹಿಂದೆಂದೂ ದಾಳಿ ನಡೆದಿರಲಿಲ್ಲ. ಇದೊಂದು ದೇಶದ ಕರಾಳ ದಿನ ಎಂದು ಟ್ರಂಪ್‌ ಹೇಳಿದ್ದಾರೆ. ತನಿಖಾ ಸಂಸ್ಥೆಗಳ ಜೊತೆ ನಾನು ಸಹಕಾರ ನೀಡುತ್ತಿದ್ದ ಹೊರತಾಗಿಯೂ ಇಂಥ ಕ್ರಮಕೈಗೊಳ್ಳಲಾಗುತ್ತಿದೆ. ಇದು ನ್ಯಾಯಾಂಗ ವ್ಯವಸ್ಥೆಯನ್ನು ಅಸ್ತ್ರವಾಗಿ ದುರ್ಬಳಕೆ ಮಾಡಿಕೊಂಡಂತೆ. ಇದು ಕಟ್ಟಾ ಡೆಮಾಕ್ರಾಟ್ಸ್‌ಗಳ ದಾಳಿಯಾಗಿದೆ. 2024ರ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಅವರಿಗೆ ಇಷ್ಟವಿಲ್ಲ ಎಂದು ಟೀಕಿಸಿದ್ದಾರೆ. ಯಾವುದೇ ಸೂಚನೆ ನೀಡದೆ ಈ ದಾಳಿ ನಡೆಸಲಾಗಿದೆ ಎಂದು ಇಬ್ಬರು ಟ್ರಂಪ್ ಆಪ್ತರು ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!