ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಪ್ರಕರಣ ಮಾಸುವ ಮುನ್ನ ರಾಜಭವನಕ್ಕೆ ಬಾಂಬ್ ಬೆದರಿಕೆ ಕರೆ ಮಾಡಲಾಗಿತ್ತು. ಅಂತೂ ಪೊಲೀಸರು ಪ್ರಕರಣವನ್ನು ಬೇಧಿಸಿದ್ದು, ಆರೋಪಿಯನ್ನು ಸೆರೆಹಿಡಿದಿದ್ದಾರೆ.
ಆರೋಪಿ ಭಾಸ್ಕರ್ ಆಕಸ್ಮಿಕವಾಗಿ ಕರೆ ಮಾಡಿದ್ದಲ್ಲ, ಬೇಕಂತಲೇ ಬಾಂಬ್ ಬೆದರಿಕೆ ಕರೆ ಮಾಡಿದ್ದಾನೆ. ಗೂಗಲ್‌ನಲ್ಲಿ ನಂಬರ್ ಪಡೆದುಕೊಂಡು, ಹೊಸ ಸಿಮ್ ಖರೀದಿ ಮಾಡಿ ಅದರಿಂದ ಆರೋಪಿ ಕರೆ ಮಾಡಿದ್ದಾನೆ.
ಆತನ ಲೊಕೇಷನ್ ಟ್ರ್ಯಾಕ್ ಮಾಡಿದಾಗ ಕರೆ ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಿಂದ ಬಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸಿಮ್ ಕೊಟ್ಟವರ ವಿಚಾರಣೆಯನ್ನೂ ಪೊಲೀಸರು ಮಾಡಿದ್ದಾರೆ. ಇಷ್ಟೆಲ್ಲಾ ಆಗುವ ಹೊತ್ತಿಗೆ ಆರೋಪಿ ಭಾಸ್ಕರ್ ಮೆಜೆಸ್ಟಿಕ್‌ನಲ್ಲಿ ಬಸ್ ಹತ್ತಿ ಆಂಧ್ರಪ್ರದೇಶದ ಕಣಿಪಕ್ಕಂ ದೇವಾಲಯವನ್ನು ತಲುಪಿದ್ದಾನೆ.
ಆತನ ನಂಬರ್‌ನ ಟವರ್ ಡಂಪ್ ಮಾಹಿತಿ ಆಧಾರದ ಮೇಲೆ ಲೊಕೇಷನ್ ಟ್ರ್ಯಾಕ್ ಮಾಡಲಾಗಿದೆ. ಇದರಿಂದಾಗಿ ಆರೋಪಿ ದೇವಸ್ಥಾನದಲ್ಲಿ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರು ನೋಡೋಕೆ ಬಂದವನು ಸುಮ್ಮನೆ ಇರಲಾರದೆ ಈ ರೀತಿ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ.
ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಯ ತೀವ್ರ ವಿಚಾರಣೆ ನಡೆಸಿದ್ದಾರೆ.