ಹೊಸ ದಿಗಂತ ವರದಿ, ಕುಶಾಲನಗರ:
ಕೊಡಗಿನ ಪ್ರಮುಖ ಜಲಾಶಯವಾದ ಹಾರಂಗಿ ಜಲಾಶಯದಿಂದ ಎರಡನೇ ಹಂತದ ನೀರನ್ನು ಬಿಡುಗಡೆ ಮಾಡಲಾಯಿತು.
ಜನ ಹಾಗೂ ಜಾನುವಾರುಗಳಿಗೆ ಬೇಸಿಗೆಯಲ್ಲಿ ಕುಡಿಯಲು ನೀರು ಒದಗಿಸುವಂತೆ ಸರಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮವು ಮುಂದಿನ 15 ದಿನಗಳವರೆಗೆ ಎರಡನೇ ಹಂತದ ನೀರನ್ನು ಬಿಡುಗಡೆ ಮಾಡಲಿದೆ.
ಕೊಡಗು ಜಿಲ್ಲೆಯ ಗಡಿ ಭಾಗ ಸೇರಿದಂತೆ ಮೂರು ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶದ ಕೆರೆಕಟ್ಟೆಗಳು ತುಂಬಲು ಮತ್ತು ದನಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಹಾಗೂ ಈ ವ್ಯಾಪ್ತಿಯ ರೈತರು ಹಂಗಾಮಿ ಬೆಳೆಗಳಾದ ಅಲಸಂಡೆ, ಕಾಳುಗಳನ್ನು ಬೆಳೆಯಲು ಈ ನೀರು ಸಹಕಾರಿಯಾಗಲಿದೆ.
ಅಣೆಕಟ್ಟೆಯಿಂದ ಮುಖ್ಯ ನಾಲೆಯ ಮೂಲಕ 800 ಕ್ಯುಸೆಕ್ ನೀರನ್ನು ಬಿಟ್ಟು ಕಣಿವೆ ಸಮೀಪದ ಎಡ ದಂಡೆಯ ಮೂಲಕ 250 ಹಾಗೂ ಬಲ ದಂಡೆಯ ಮೂಲಕ 550 ನೀರನ್ನು ಬುಧವಾರದಿಂದ ಹರಿಸಲಾಗಿದೆ ಎಂದು ಹಾರಂಗಿ ನೀರಾವರಿ ಇಲಾಖೆಯ ಇಂಜಿನಿಯರ್ ಸಿದ್ದರಾಜ್ ತಿಳಿಸಿದ್ದಾರೆ.