ಸಬೂಬು ಹೇಳದೆ ಸದಸ್ಯತ್ವ ನೋಂದಣಿ ಗುರಿ ಸಾಧಿಸಿ: ಆರ್.ಅಶೋಕ್ ಸಲಹೆ

ಹೊಸದಿಗಂತ ವರದಿ, ಚಿತ್ರದುರ್ಗ:

ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರು, ಸದಸ್ಯರು ಜೀವಾಳವಿದ್ದಂತೆ. ಈ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳು ಯಾವುದೇ ಸಬೂಬು ಹೇಳದೆ ಅಧ್ಯಕ್ಷರು ನಿಗದಿಪಡಿಸಿದ ಸದಸ್ಯತ್ವ ನೋಂದಣಿ ಗುರಿ ಸಾಧಿಸುವಂತೆ ವಿಪಕ್ಷ ನಾಯಕ ಆರ್.ಅಶೋಕ್ ಸೂಚನೆ ನೀಡಿದರು.

ಚಿತ್ರದುರ್ಗ ನಗರದ ಜಗಲೂರು ಮಹಾಲಿಂಗಪ್ಪ ಕಂಪಟ್ಸ್‌ನಲ್ಲಿ ನಡೆದ ದಾವಣಗೆರೆ ವಿಭಾಗದ ಚಿತ್ರದುರ್ಗ ದಾವಣಗೆರೆ, ಮಧುಗಿರಿ, ತುಮಕೂರು ಜಿಲ್ಲೆಗಳ ಸದಸ್ಯತ್ವ ಅಭಿಯಾನದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿ ಆರು ವರ್ಷಗಳಿಗೊಮ್ಮೆ ಸದಸ್ಯತ್ವ ಅಭಿಯಾನ ನಡೆಸಲಾಗುತ್ತದೆ. ಕರ್ನಾಟಕ ರಾಜ್ಯವೂ ಸೇರಿದಂತೆ, ರಾಷ್ಟ್ರದಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನ ಚುರುಕಿನಿಂದ, ಯಶಸ್ವಿಯಾಗಿ ನಡೆಯುತ್ತಿದೆ. ಇಡೀ ವಿಶ್ವದಲ್ಲಿಯೇ ಬಿಜೆಪಿಯು ಅತ್ಯಂತ ಹೆಚ್ಚಿನ ಸದಸ್ಯರನ್ನು ಹೊಂದಿದ ದೊಡ್ಡ ಪಕ್ಷವಾಗಿ ದಾಖಲೆ ಬರೆದಿದೆ. ಕಳೆದ ಬಾರಿ ೧೮ ಕೋಟಿಗಳಷ್ಟಿದ್ದ ಸದಸ್ಯತ್ವ ಸಂಖ್ಯೆಯು ಈ ಬಾರಿ ೨೫ ಕೋಟಿ ತಲುಪುವ ಗುರಿ ಹೊಂದಲಾಗಿದೆ ಎಂದರು.

ದೇಶ ಕಂಡ ಧೀಮಂತ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ರಾಷ್ಟ್ರವು ಪ್ರಗತಿ ಪಥದತ್ತ ಯಶಸ್ವಿಯಾಗಿ ಮುನ್ನಡೆದಿದೆ. ಕಳೆದ ೧೦ ವರ್ಷಗಳಲ್ಲಿ ದೇಶವು ಅನೇಕ ರಂಗಗಳಲ್ಲಿ ಪ್ರಗತಿ ಸಾಧಿಸಿದೆ. ವಿಶ್ವದ ಐದನೇ ಆರ್ಥಿಕ ಶಕ್ತಿಯಾಗಿ ಭಾರತವು ಮೈದಳಿದಿದ್ದು, ಮುಂದಿನ ಐದು ವರ್ಷಗಳಲ್ಲಿ ಮೂರನೇ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ಪ್ರಧಾನಿ ಮೋದಿಯವರು ಜನರಿಂದ, ಜನರಿಗಾಗಿ, ಜನಪರ ಸರ್ಕಾರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ೨೫ ಕೋಟಿ ಜನರು ಬಡತನ ರೇಖೆ ದಾಟಿ ಈಚೆಗೆ ಬಂದು, ಆರ್ಥಿಕವಾಗಿ ಚೇತನ ಅಂಶಗಳೇ ಹೇಳುತ್ತಿವೆ. ಮೋದಿಯವರ ಸಮರ್ಥ ಸಾಧ್ಯವಾಗಿದೆ. ನಾಯಕತ್ವದಿಂದಾಗಿ ಇದು ಸಾಧ್ಯವಾಗಿದೆ. ಮುಂದಿನ ವರ್ಷಗಳಲ್ಲಿ ದೇಶವು ಇನ್ನೂ ಹೆಚ್ಚಿನ ಅಭೀವೃದ್ದಿ ಸಾಧಿಸಲಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷವು ಸಂಪೂರ್ಣವಾಗಿ ಅಭಿವೃದ್ಧಿ ವಿರೋಧಿಯಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಅನೇಕ ಹಗರಣ ಸರಮಾಲೆ ನಡೆದಿದ್ದವು, ಆದರೆ ಮೋದಿ ಸರ್ಕಾರವು ೧೦ ವರ್ಷಗಳಲ್ಲಿ ಯಾವುದೇ ಅವ್ಯವಹಾರ ಭ್ರಷ್ಠಾಚಾರಗಳ ಆರೋಪಗಳಿಲ್ಲದೆ ಪಾರದರ್ಶಕ ಪ್ರಮಾಣಿಕ ಆಡಳಿತ ನೀಡಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ವಿದೇಶಕ್ಕೆ ತೆರಳಿ ನಮ್ಮ ದೇಶದ ಅಭಿವೃದ್ಧಿ ಕುಂಠಿತಗೊಂಡಿದೆ. ಪ್ರಜಾಪ್ರಭುತ್ವ ಇಲ್ಲ ಎಂದು ಎಂದು ಏನೇನೋ ಮಾತನಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದರು.

ಇಂಡಿಯನ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಇದೀಗ ಇಂಡಿಯನ್ ನ್ಯಾಷನಲ್ ಕಮರ್ಷಿಯಲ್ ಕಾಂಗ್ರೆಸ್ ಆಗಿ ಮಾರ್ಪಟ್ಟಿದೆ ಎಂದು ವ್ಯಂಗ್ಯವಾಡಿದರಲ್ಲದೇ, ಮುಂದೆ ನಡೆಯುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ನೆಲ ಕಚ್ಚಲಿದೆ. ದೇಶದ ಪ್ರಜ್ಞಾವಂತ ’ಮತದಾರರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಹಾಗೂ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ಅವರು ಕಾಂಗ್ರೆಸ್‌ನವರದ್ದು ತುಷ್ಠಿಕರಣ ರಾಜಕೀಯವಾದರೆ ಬಿಜೆಪಿಯದ್ದು ಸಮಗ್ರ, ಸರ್ವಜನರ ಅಭಿವೃದ್ಧಿಯೇ ಮುಖ್ಯ ಗುರಿಯಾಗಿದೆ. ಕಾಂಗ್ರೆಸ್‌ನವರು ಏನೇ ಮಾಡಿದರೂ, ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಚಿದಾನಂದಗೌಡ, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಬಿಜೆಪಿ ಸದಸ್ಯತ್ವ ಅಭಿಯಾನದ ಸಂಚಾಲಕರಾದ ನಂದೀಶ್ ರೆಡ್ಡಿ, ದಾವಣಗೆರೆ ಜಿಲ್ಲಾಧ್ಯಕ್ಷ ರಾಜಶೇಖರ್, ಚಿತ್ರದುರ್ಗ ಜಿಲ್ಲಾಧ್ಯಕ್ಷ ಮುರಳಿ, ಗಾಯತ್ರಿ ಸಿದ್ದೇಶ್ವರ್, ಶಿವಕುಮಾರ್, ನಾಗರಾಜ್ ಲೋಕಿಕೆರೆ, ಕೆ.ಟಿ.ಕುಮಾರಸ್ವಾಮಿ, ಲಿಂಗಮೂರ್ತಿ, ಬಸವರಾಜ ನಾಯ್ಕ್, ಯಶವಂತರಾವ್ ಜಾಧವ್, ವಿರೇಶ್ ಹನಗವಾಡಿ, ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಮುಖಂಡರಾದ ಲಕ್ಷ್ಮೀಕಾಂತ್, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಸುರೇಶ್ ಸಿದ್ದಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!