ರಾಜಕೀಯದಲ್ಲಿ ಸ್ಥಿರತೆ ಸಾಧಿಸುವುದು ಪ್ರಸ್ತುತ ಕಾಲಘಟ್ಟಕ್ಕೆ ಅನಿವಾರ್ಯ: ಡಾ. ರಾಮ ಮಾಧವ

ಬೆಂಗಳೂರು: ಎಲ್ಲ ದೇಶಗಳೊಂದಿಗೆ ಉತ್ತಮ ಸಂಬಂಧ ಸಾಧಿಸುವ ನಿಟ್ಟಿನಲ್ಲಿ ಭಾರತ ತನ್ನ ಕಾರ್ಯತಂತ್ರದ ನಿಲುವುಗಳಿಗೆ ಸದಾ ಬದ್ಧರಾಗಿರಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ‌ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ಡಾ. ರಾಮ ಮಾಧವ ಹೇಳಿದರು.

ನಗರದ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆದ ಯಂಗ್ ಥಿಂಕರ್ಸ್ ಮೀಟ್ ನಲ್ಲಿ ಭಾರತ ಹಾಗೂ ವಿಶ್ವ – ಭೌಗೋಳಿಕ ರಾಜಕೀಯ ವಿಷಯದ ಉಪನ್ಯಾಸ ನೀಡಿದ ಅವರು, ಪ್ರಸ್ತುತ ವಿಶ್ವದ ಸನ್ನಿವೇಶ ಅವಲೋಕಿಸಿದಾಗ, ಅಮೇರಿಕಾ ವಿಶ್ವದ ಆರ್ಥಿಕತೆಯಲ್ಲಿ ಅವನತಿ ಹೊಂದುತ್ತಿದೆ. ಇನ್ನೊಂದೆಡೆ ಚೀನಾ ಎಲ್ಲ ಕ್ಷೇತ್ರಗಳಲ್ಲಿ ಉತ್ಕೃಷ್ಟತೆ ಸಾಧಿಸುತ್ತಿದೆ. ಮತ್ತೊಂದು ಶೀತಲ ಸಮರ ಸಂಭವಿಸುವ ನಿರೀಕ್ಷೆಯೂ ಇದೆ ಎಂದರು.

ಬಹುತೇಕ ದೇಶಗಳು ಅಣು ಶಕ್ತಿ ಹೊಂದಲು ಬಯಸುತ್ತಿದ್ದು, ಭಾರತ, ಏಷಿಯನ್, ಆಫ್ರಿಕನ್, ಯುರೋಪ್ ಯುನಿಯನ್, ಇಸ್ಲಾಂ ದೇಶಗಳು ಶಕ್ತಿ ಕೇಂದ್ರಗಳಾಗಿ ಬದಲಾಗುತ್ತಿವೆ. ವಿಶ್ವ ಸಂಸ್ಥೆಯನ್ನು ಬಹುತೇಕ ದೇಶಗಳು ಪರಿಗಣಿಸುತ್ತಿಲ್ಲ. ಮತ ಸಂಘಟನೆಗಳೂ ಕೂಡ ವಿಶ್ವ ರಾಜಕೀಯದಲ್ಲಿ ಪ್ರಭಾವ ಬೀರುತ್ತಿದೆ. ತಂತ್ರಜ್ಞಾನದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸೇರಿದಂತೆ ನವೀನತೆಗಳು ನಿರಂತರವಾಗಿದ್ದು, ಆದರೆ ಇವು ಎಲ್ಲ ಕ್ಷೇತ್ರಗಳಿಗೆ ಪೂರಕವಾಗಿಲ್ಲ ಎಂದರು.

ವಿಶ್ವದ ಆರ್ಥಿಕತೆ ಮೊದಲು ಡಾಲರ್ ಕೇಂದ್ರವಾಗಿತ್ತು ಆದರೆ ಈಗ ಬದಲಾಗುತ್ತಿದೆ. ಯುರೋಪ್, ಚೀನಾ, ಭಾರತದ ಕರೆನ್ಸಿ ವಹಿವಾಟುಗಳು ಅಧಿಕವಾಗಿವೆ. ಕಾಲಕ್ರಮೇಣ ಎಲ್ಲ ದೇಶಗಳಲ್ಲಿ ರಾಷ್ಟ್ರೀಯತೆಯೊಂದಿಗೆ ಸ್ವಾವಲಂಬಿಗಳಾಗುತ್ತವೆ. ಇದು ಸದ್ಯದ ಭೌಗೋಳಿಕ ರಾಜಕೀಯದ ಕಾರ್ಯತಂತ್ರಗಳಾಗಿವೆ ಎಂದರು.

ಈ ಹಿನ್ನೆಲೆಯಲ್ಲಿ ಭವಿಷ್ಯದ ಸನ್ನಿವೇಶಗಳಿಗೆ ಸಜ್ಜಾಗಲು ಭಾರತ ಒಂದಿಷ್ಟು ಪರಿವರ್ತನೆ ಹೊಂದಬೇಕು. ವಾಸ್ತವಕ್ಕೆ ತಕ್ಕಂತೆ ವರ್ತಿಸುವುದು, ರಾಜಕೀಯದಲ್ಲಿ ಸ್ಥಿರತೆ ಸಾಧಿಸುವುದು ಪ್ರಸ್ತುತ ಅನಿವಾರ್ಯ. ಅದೃಷ್ಟವಶಾತ್ ಕಳೆದ 10 ವರ್ಷಗಳಿಂದ ಸ್ಥಿರ ಸರ್ಕಾರ ದೇಶದಲ್ಲಿದೆ. ರಾಮಮಂದಿರ, ಆರ್ಟಿಕಲ್ 370, ಏಕರೂಪ ನಾಗರಿಕ ಸಂಹಿತೆ ಇವೂ ಅವಶ್ಯ ಆದರೆ ಮುಂದಿನ ದಶಕದಲ್ಲಿ ಭಾರತ ಆರ್ಥಿಕ ಪ್ರಗತಿಗೆ ಹೆಚ್ವಿನ ಆದ್ಯತೆ ನೀಡಬೇಕು. ನೌಕಾ ಕ್ಷೇತ್ರ, ಬಾಹ್ಯಾಕಾಶ ಸಾಧನೆಗೆ ಅಧಿಕ ಗಮನ ಹರಿಸಬೇಕು ಎಂದರು.

ಭಾರತದಲ್ಲಿ ಸಂಶೋಧನೆ ಹಾಗೂ ಅನ್ವೇಷಣೆಗಳು ಉನ್ನತಗೊಳ್ಳಬೇಕು. ಈ ನಿಟ್ಟಿನಲ್ಲಿ ಯುಪಿಐ ಟ್ರಾನ್ಸಾಕ್ಷನ್ ಅನ್ವೇಷಣೆ ನಮ್ಮ ದೊಡ್ಡ ಸಾಧನೆ. ಅತ್ಯಂತ ಕೆಳ ಹಂತಕ್ಕೂ ಅದು ತಲುಪಿದೆ. ಇದನ್ನೇ ಉಳಿದ ಬಹುತೇಕ ದೇಶಗಳು ಅನುಸರಿಸಲು ಬಯಸುತ್ತಿವೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!