ಕೈಗಾರಿಕೆಗಳ ಸ್ಥಾಪನೆಗೆ 50 ಸಾವಿರ ಎಕರೆ ಭೂಮಿ ಸ್ವಾಧೀನ: ಸದನದಲ್ಲಿ ಸಚಿವ ನಿರಾಣಿ ಮಾಹಿತಿ 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ಬೆಂಗಳೂರು
ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚುವರಿಯಾಗಿ 50 ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ 20 ಸಾವಿರ ಮತ್ತು ಇತರ ಜಿಲ್ಲೆಗಳಲ್ಲಿ 30 ಸಾವಿರ ಎಕರೆ ಭೂಮಿಯನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ವಿಧಾನ ಪರಿಷತ್‍ನ ಪ್ರಶ್ನೋತ್ತರದಲ್ಲಿ ಸದಸ್ಯರಾದ ಸಲೀಂ ಅಹಮ್ಮದ್ ಪ್ರಶ್ನೆಗೆ ಉತ್ತರಿಸಿದ ಸಚಿವ ನಿರಾಣಿ,  ಕೈಗಾರಿಕೆ ಇಲಾಖೆಯಿಂದ 188 ಕೈಗಾರಿಕಾ ಪ್ರದೇಶ ಸ್ಥಾಪಿಸಲಾಗಿದೆ. ಅದಕ್ಕಾಗಿ 1.60 ಲಕ್ಷ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಅದರಲ್ಲಿ 52,008 ಎಕರೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಉಳಿದ ಭೂಮಿಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ನಿರಾಣಿ ಮಾಹಿತಿ ನೀಡಿದ್ದಾರೆ.
ಯೋಜನೆಯ ಅಂದಾಜು ಗಾತ್ರ ಆಧರಿಸಿ ಉದ್ಯಮ ಆರಂಭಿಸಲು ಕಾಲಮಿತಿ ನಿಗದಿ ಪಡಿಸಲಾಗುತ್ತದೆ. ಉಕ್ಕು ಉದ್ಯಮಗಳಿಗೆ ಐದು ವರ್ಷಗಳವರೆಗೂ ಸಮಯ ಬೇಕಾಗುತ್ತದೆ. ಒಟ್ಟಾರೆ ಉದ್ಯಮ ಆರಂಭಕ್ಕೆ ಗರಿಷ್ಠ 10 ವರ್ಷಗಳ ಕಾಲಾವಕಾಶ ನೀಡಲಾಗುತ್ತದೆ. ಅದರ ಒಳಗೆ ಉದ್ಯಮ ಆರಂಭವಾಗದಿದ್ದರೆ ನೋಟಿಸ್ ನೀಡಿ ಭೂಮಿ ಹಿಂಪಡೆಯುವ ಪ್ರಕ್ರಿಯೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಈವರೆಗೂ 117 ಉದ್ದಿಮೆದಾರರಿಗೆ ನೋಟಿಸ್ ನೀಡಲಾಗಿದೆ. ಕೆಲವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ
ತಂದಿದ್ದಾರೆ. ಇನ್ನು ಮುಂದೆ ಕೆವಿಯಟ್ ಹಾಕಿ ಭೂಮಿ ಹಿಂಪಡೆಯಲು ಮುಂದಿನ ಕ್ರಮ ಜರುಗಿಸಲಾಗುವುದು
ಎಂದು ನಿರಾಣಿ ಉತ್ತರಿಸಿದ್ದಾರೆ.
ನವೆಂಬರ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. ವಿದೇಶ ಬಂಡವಾಳ ಹೂಡಿಕೆಯಲ್ಲಿ ನಮ್ಮ ರಾಜ್ಯ ಸತತ ನಾಲ್ಕನೆ ತ್ರೈಮಾಸಿಕದಲ್ಲೂ ಮೊದಲ ಸ್ಥಾನದಲ್ಲಿದೆ. ದೇಶದ ಹೂಡಿಕೆಯಲ್ಲಿ ಶೇ.38ರಷ್ಟು ಪಾಲನ್ನು ನಾವು ಹೊಂದಿದ್ದೇವೆ ಎಂದು ನಿರಾಣಿ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!