ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಹಾ ಕುಂಭಮೇಳದ ಬಗ್ಗೆ ತಪ್ಪು ಮಾಹಿತಿಗಳನ್ನು ಹರಡುತ್ತಿರುವವರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣು ಇರಿಸಿದ್ದು, ಒಟ್ಟು 14 ಎಕ್ಸ್ ಖಾತೆಗಳ ವಿರುದ್ಧ ಕಾನೂನು ಸಮರ ನಡೆದಿದೆ.
ಉತ್ತರ ಪ್ರದೇಶದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರಶಾಂತ್ ಕುಮಾರ್ ಮಾಹಿತಿ ನೀಡಿ, ಸಾಮಾಜಿಕ ಜಾಲತಾಣಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಹೇಳಿದ್ದಾರೆ.
ತಪ್ಪು ಮಾಹಿತಿಗಳನ್ನು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿಯಮಿತ ನಿಗಾ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಅದರಲ್ಲೂ ಮಹಾ ಕುಂಭದಂತಹ ಬೃಹತ್ ಕಾರ್ಯಕ್ರಮದ ಬಗ್ಗೆ ತಪ್ಪು ಮಾಹಿತಿ ಹರಡದಂತೆ ನಿಗಾ ವಹಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಜಾರ್ಖಂಡ್‌ನ ಧನ್ ಬಾದ್‌ಗೆ ಸಂಬಂಧಿಸಿರುವ ವಿಡಿಯೊವೊಂದನ್ನು ಪ್ರಯಾಗ್‌ರಾಜ್‌ನ ಮಹಾಕುಂಭದ ವಿಡಿಯೊ ಎಂದು ತಪ್ಪಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹರಿಯಬಿಡಲಾಗಿತ್ತು.
ಜಾರ್ಖಂಡ್ ಪೊಲೀಸರು ಈ ವರ್ಷದ ಜ. 1ರಂದು ನಡೆಸಿದ ಲಾಠಿ ಚಾರ್ಜ್ ಇದಾಗಿದ್ದು, ಇದನ್ನು ಉತ್ತರ ಪ್ರದೇಶ ಪೊಲೀಸರೊಂದಿಗೆ ಲಿಂಕ್ ಮಾಡಿ, ‘ತಮ್ಮ ತಪ್ಪಿ ಹೋದ ಸಂಬಂಧಿಕರನ್ನು ಹುಡುಕುತ್ತಿರುವ ಮಹಾ ಕುಂಭದ ಯಾತ್ರಿಗಳ ಮೇಲೆ ಪೊಲೀಸರ ದೌರ್ಜನ್ಯ’ ಎಂಬ ಬರಹದಡಿಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.
ಕೂಲಂಕುಷವಾಗಿ ತನಿಖೆ ನಡೆಸಿದ ಸಂದರ್ಭದಲ್ಲಿ ಈ ವಿಡಿಯೊ ಪ್ರಯಾಗ್‌ರಾಜ್‌ನದ್ದಲ್ಲ. ಬದಲಾಗಿ ಧನ್‌ಬಾದ್‌ನದ್ದು ಎಂದು ತಿಳಿದು ಬಂದಿದೆ. ಕುಂಭಮೇಳದ ಪೊಲೀಸರು ಸಹ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ ಎಂದು ಈ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇಂತಹ ಉದ್ದೇಶಪೂರ್ವಕ ಕೃತ್ಯಗಳ ಮೂಲಕ ರಾಜ್ಯ ಸರ್ಕಾರ ಹಾಗೂ ಇಲ್ಲಿನ ಪೊಲೀಸ್ ವ್ಯವಸ್ಥೆಯ ಇಮೇಜಿಗೆ ಧಕ್ಕೆ ತರಲಾಗುತ್ತಿದ್ದು, ಸಾರ್ವಜನಿಕರ ನಡುವೆ ಅಶಾಂತಿ ಸೃಷ್ಟಿಸುವ ಕ್ರಮಗಳೂ ಇದಾಗಿವೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇಂತಹ ತಪ್ಪು ಸಂದೇಶಗಳನ್ನು ಸಮಾಜದಲ್ಲಿ ಹರಡುವುದರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಉತ್ತರ ಪ್ರದೇಶ ಪೊಲೀಸರು, ಇಂತಹ 14 ಎಕ್ಸ್ ಅಕೌಂಟ್‌ಗಳ ಮೇಲೆ ಎಫ್.ಐ.ಆರ್. ದಾಖಲಿಸಿದ್ದಾರೆ ಹಾಗೂ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದೂ ಈ ಹೇಳಿಕೆಯಲ್ಲಿ ತಿಳಿಸಲಾಗಿದೆ.