ಪದವೀಧರರು, ನಿರುದ್ಯೋಗಿಗಳ ಉದ್ಯೋಗ ಸಮಸ್ಯೆ ನಿವಾರಿಸಲು ಸರ್ಕಾರದಿಂದ ಕ್ರಮ; ಸಚಿವ ಎಸ್.ಟಿ.ಸೋಮಶೇಖರ್

ಹೊಸದಿಗಂತ ವರದಿ ಮೈಸೂರು:

ಪದವೀಧರರು ಹಾಗೂ ನಿರುದ್ಯೋಗಿಗಳು ಎದುರಿಸುತ್ತಿರುವ ಉದ್ಯೋಗ ಸಮಸ್ಯೆಗಳನ್ನು ನಿವಾರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿವೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಭಾನುವಾರ ನಗರದ ಬಲ್ಲಾಳ್ ವೃತ್ತದಲ್ಲಿರುವ ನಿತ್ಯೋತ್ಸವ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮೈಸೂರು ವಿಭಾಗದಿಂದ ಆಯೋಜಿಸಲಾಗಿದ್ದ ದಕ್ಷಿಣ ಪದವೀಧರರ ಕ್ಷೇತ್ರದ ಐದು ಜಿಲ್ಲೆಗಳ ಚುನಾವನಾ ನಿರ್ವಹಣಾ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುವಕರು ಹಾಗೂ ಪದವೀಧರರು ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆಗೆಂದು ಮುಖ್ಯಮಂತ್ರಿಗಳು ಖಾಲಿಯಿರುವ ಎಲ್ಲಾ ಇಲಾಖೆಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡುವಂತೆ ಆದೇಶಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆ ಜಾರಿಗೆ ಬರಲಿದೆ. ಅಲ್ಲದೇ ಯುವಕರಿಗೆ, ಪದವೀಧರರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರವೂ ಉದ್ಯೋಗ ಸೃಷ್ಠಿಗೆ ಅನೇಕ ಕ್ರಮಕೈಗೊಳ್ಳುತ್ತಿದ್ದಾರೆ. ಇದರಿಂದ ಪದವೀಧರರು, ನಿರುದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಧಿಕಾರದಲ್ಲಿದ್ದಾಗ ರೈತರಿಗೆ ಸಾಲ ಮನ್ನಾ ಮಾಡುವುದಾಗಿ ಕೇವಲ ಘೋಷಣೆಯನ್ನು ಮಾತ್ರ ಮಾಡಿದವು. ಆದರೆ ಸಾಲ ಮನ್ನಾ ಮಾಡಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು. ಈಗಾಗಲೇ ರೈತರ 6350 ಕೋಟಿ ರೂಗಳ ಸಾಲ ಮನ್ನಾ ಮಾಡಲಾಗಿದೆ. ಇನ್ನು 167ಕೋಟಿ ರೂ ಸಾಲ ಮನ್ನಾ ಮಾಡಲಾಗುವುದು. ಈ ವರ್ಷ ಬಜೆಟ್‌ನಲ್ಲಿ 33 ಲಕ್ಷ ಮಂದಿ ರೈತರಿಗೆ 24 ಸಾವಿರ ಕೋಟಿ ರೂ ಸಾಲ ನೀಡಲು ತೀರ್ಮಾನಿಸಲಾಗಿದೆ. ಇದರಲ್ಲಿ ಹೊಸ ರೈತರಿಗೂ ಸಾಲ ನೀಡಲಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ 9 ಲಕ್ಷ ಮಂದಿ ಮಹಿಳಾ ರೈತರು ಡೈರಿಗಳಿಗೆ ಹಾಲು ಹಾಕುತ್ತಿದ್ದಾರೆ. ಅವರುಗಳಿಗೆ ಸಾಲ ಸೌಲಭ್ಯಗಳನ್ನು ಒದಗಿಸಲು ಹಾಗೂ ರೈತರ ಆದಾಯವನ್ನು ದ್ವಿಗುಣ ಮಾಡುವ ಉದ್ದೇಶದಿಂದ ನಂದಿನಿ ಕ್ಷೀರ ಸಮೃದ್ಧ ಬ್ಯಾಂಕ್‌ನ್ನು ಸ್ಥಾಪಿಸಲಾಗುತ್ತಿದೆ. ನಬಾರ್ಡ್ನ ಅನುದಾನದಡಿ 26 ಲಕ್ಷ ಮಂದಿ ರೈತರಿಗೆ ಅನುಕೂಲವನ್ನು ಮಾಡಿಕೊಡಲಾಗುತ್ತದೆ ಎಂದು ನುಡಿದರು.

ಸಭೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮೈಸೂರು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಜಿ.ಗಿರಿಧರ್, ವಾಣೀಶ್, ಸೋಮಸುಂದರ್, ಶಾಸಕರುಗಳಾದ ಎಲ್.ನಾಗೇಂದ್ರ, ಪ್ರೀತಮ್‌ಗೌಡ, ಎನ್.ಮಹೇಶ್, ಮಾಜಿ ಶಾಸಕರುಗಳಾದ ಜಿ.ಎನ್.ನಂಜುಂಡಸ್ವಾಮಿ, ಪರಿಮಳಾ ನಾಗಪ್ಪ, ಭಾರತಿ ಶಂಕರ್, ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ವಿವಿಧ ನಿಗಮಮಂಡಳಿಗಳ ಅಧ್ಯಕ್ಷರುಗಳಾದ ಎಂ.ರಾಮಚಂದ್ರ, ಎ.ಹೇಮಂತ್ ಕುಮಾರ್ ಗೌಡ, ಎನ್.ವಿ.ಫಣೀಶ್, ಎಲ್.ಆರ್.ಮಹದೇವಸ್ವಾಮಿ, ಎಸ್.ಮಹದೇವಪ್ಪ, ಕೃಷ್ಣಪ್ಪಗೌಡ, ಚಾಮರಾಜನಗರ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಮಂಡ್ಯದ ಜಿಲ್ಲಾಧ್ಯಕ್ಷ ವಿಜಯಕುಮಾರ್, ದಕ್ಷಿಣ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾದ ಮೈ.ವಿ.ರವಿಶಂಕರ್, ಮುಖಂಡ ಆರ್.ರಘುಕೌಟಿಲ್ಯ, ಕೋಟೆ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!