ಪಕ್ಷದಲ್ಲಿದ್ದುಕೊಂಡೇ ಪಕ್ಷಕ್ಕೆ ದ್ರೋಹ ಎಸಗಿದರೆ ಸಹಿಸಲ್ಲ; ಸಚಿವ ಎಸ್.ಟಿ.ಸೋಮಶೇಖರ್

ಹೊಸದಿಗಂತ ವರದಿ ಮೈಸೂರು: 

ಪಕ್ಷದಲ್ಲಿದ್ದುಕೊಂಡು, ಪಕ್ಷಕ್ಕೆ ದ್ರೋಹ ಎಸಗುವವರನ್ನು ಸಹಿಸಲು ಸಾಧ್ಯವಿಲ್ಲ. ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಒಳೇಟು ನೀಡುವ ಕೆಲಸವನ್ನು ಯಾವುದೇ ಕಾರಣಕ್ಕೂ ಯಾರೂ ಮಾಡಬಾರದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಾಕೀತು ಮಾಡಿದರು. ಭಾನುವಾರ ದಕ್ಷಿಣ ಪದವೀಧರರ ಕ್ಷೇತ್ರದ ಐದು ಜಿಲ್ಲೆಗಳ ಚುನಾವನಾ ನಿರ್ವಹಣಾ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಾಮರಾಜನಗರ-ಮೈಸೂರು ಜಿಲ್ಲೆಗಳಿಂದ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆರ್.ಕೌಟಿಲ್ಯ ರಘು ಅವರು ಮೊದಲ ಪ್ರಾಶಸ್ತ್ಯದ ಮತಗಳಲ್ಲಿಯೇ ಗೆಲ್ಲುವಂತಹ ಎಲ್ಲಾ ವಿಫುಲ ಅವಕಾಶಗಳಿದ್ದವು. ಆದರೆ ಒಳೇಟು ಬಿದ್ದ ಕಾರಣ, ಕೈಯಲ್ಲಿ ಇದ್ದಂತಹ ಗೆಲುವಿನ ಅವಕಾಶವನ್ನು ಕಳೆದುಕೊಂಡವು. ಇದು ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆಯಲ್ಲಿ ಮರುಕಳಿಸಬಾರದು. ಪಕ್ಷದಲ್ಲಿಯೇ ಇದ್ದುಕೊಂಡು, ಪಕ್ಷದ ಅಭ್ಯರ್ಥಿಗೆ ಒಳೇಟು ನೀಡುವ, ಮೂಲಕ ಮೋಸ ಮಾಡುವರನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಗುಡುಗಿದರು.

ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆ. ವಿಧಾನಸಭೆಯಲ್ಲಿ ಇದು ಅಂಗೀಕಾರವಾಗಿದೆ. ಆದರೆ ವಿಧಾನಪರಿಷತ್‌ನಲ್ಲಿ ಪಕ್ಷಕ್ಕೆ ಬಹುಮತ ಇಲ್ಲ ಕಾರಣ, ಅಲ್ಲಿ ಅಂಗೀಕಾರವಾಗುತ್ತಿಲ್ಲ. ಹಾಗಾಗಿ ಪರಿಷತ್‌ನಲ್ಲಿ ಪಕ್ಷ ಬಹುಮತ ಪಡೆಬೇಕೆಂದರೆ, ವಿಧಾನಪರಿಷತ್ ಸದಸ್ಯ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲೇಬೇಕಾಗಿದೆ. ಹಾಗಾಗಿ ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾದ ಮೈ.ವಿ.ರವಿಶಂಕರ್ ಅವರನ್ನು ಗೆಲ್ಲಿಸುವುದಕ್ಕೆ ಎಲ್ಲರೂ ಶ್ರಮಿಸಬೇಕಾಗಿದೆ. ಇದಕ್ಕಾಗಿ ತಮ್ಮಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಬಿಟ್ಟು, ಒಗ್ಗಟ್ಟಿನಿಂದ ಶ್ರಮಿಸಿ ಎಂದರು.

ರಾಜಕೀಯ, ಜನ ಸಾಮಾನ್ಯರ ನೋವುಗಳ ಬಗ್ಗೆ ಗಂಧ ಗಾಳಿ ಗೊತ್ತಿಲ್ಲದವರು ಪರಿಷತ್‌ಗೆ ಆಯ್ಕೆಯಾಗುತ್ತಿದ್ದಾರೆ. ಇದನ್ನು ತಡೆಯಲು ಭೂಮಾಫಿಯಾದವರನ್ನು ತಿರಸ್ಕರಿಸಬೇಕು. ಜನ ಸಾಮಾನ್ಯರ ನೋವುಗಳು, ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಿ, ಪರಿಹಾರವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುವ ಮೈ.ವಿ.ರವಿಶಂಕರ್‌ರನ್ನು ಆಯ್ಕೆ ಮಾಡಬೇಕು. ಈ ನಿಟ್ಟಿನಲ್ಲಿ ಮತದಾರರು ಆಲೋಚಿಸಿ, ತೀರ್ಮಾನ ತೆಗೆದುಕೊಳ್ಳಬೇಕೆಂದು ಹೇಳಿದರು.

ಮೈಸೂರು ಜಿಲ್ಲೆಯಲ್ಲಿಯೇ ಹೊಸದಾಗಿ 60 ಸಾವಿರ ಮಂದಿ ಮತದಾರರ ನೋಂದಣಿಯಾಗಿದೆ. ಎಲ್ಲಾ ಕೆಲಸ, ಕಾರ್ಯಗಳನ್ನು ಬದಿಗೊತ್ತಿ, ಮತದಾರರನ್ನು ಭೇಟಿ ಮಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಂಡು, ಪಕ್ಷದ ಅಭ್ಯರ್ಥಿ ಪರವಾಗಿ ಮತಚಲಾಯಿಸುವಂತೆ ನೋಡಿಕೊಳ್ಳಬೇಕು. ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾದ ಮೈ.ರವಿಶಂಕರ್ ಅವರು ಗೆಲ್ಲಲೇಬೇಕು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!