ಜಿಲ್ಲೆಯ ಮನೆ ರಹಿತರಿಗೆ ನಿವೇಶನ ಕಲ್ಪಿಸಲು ನಿರುಪಯುಕ್ತ ಸರ್ಕಾರಿ ಜಮೀನನ್ನು ಗುರುತಿಸಲು ಕ್ರಮ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ, ಹಾವೇರಿ:

ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ, ಮನೆ ರಹಿತರಿಗೆ ನಿವೇಶನ ನೀಡಲು ಹುಲ್ಲುಗಾವಲು ಹೊರತುಪಡಿಸಿ ನಿರುಪಯುಕ್ತ ಸರ್ಕಾರಿ ಜಮೀನನ್ನು ಗುರುತಿಸಿ ನಿವೇಶನ ರಚನೆಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾಂವ ಪಟ್ಟಣದಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಭೂಮಿ ಪೂಜೆ ನೆರವೇರಿ, ಸಂತೆ ಮೈದಾನದಲ್ಲಿ ಫಲಾನುಭವಿಗಳಿಗೆ ಮನೆ ಹಾಗೂ ನಿವೇಶನಗಳ ಹಕ್ಕುಪತ್ರ ವಿತರಿಸಿ ಮಾತನಾಡಿ, ಅತಿವೃಷ್ಟಿಯಿಂದ ಹಾನಿಯಾದ ಮನೆಗಳ ಪರಿಹಾರಕ್ಕೆ ಬಾಕಿ ಇರುವ ಬಡವರ ಮನೆಗಳನ್ನು ಪುನರ್ ಪರಿಶೀಲನೆ ಮಾಡಲು ಸೂಚನೆ ನೀಡಲಾಗಿದೆ. ಈ ಮನೆಗಳಿಗೆ ನಿಯಮಾನುಸಾರ ಪರಿಹಾರ ನೀಡಲು ಕ್ರಮವಹಿಸುತ್ತೇನೆ ಎಂದರು.
ಕ್ಷೇತ್ರದಲ್ಲಿ ೩೨ ಕೊಳಚೆ ಪ್ರದೇಶಗಳನ್ನು ಘೋಷಣೆ ಮಾಡಿ ಅವುಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಶಿಗ್ಗಾಂವ-ಸವಣೂರ-ಬಂಕಾಪುರ ಪಟ್ಟಣದಲ್ಲಿ ವಾಸಮಾಡುವ ೪೦೪೨ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ಸರ್ಕಾರಿ ಜಮೀನಿನಲ್ಲಿ ವಾಸಮಾಡುತ್ತಿರುವ ರಾಜ್ಯದ ೧೦ ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದೇವೆ ಎಂದು ತಿಳಿಸಿದರು.
ಶಿಗ್ಗಾಂವ ಕ್ಷೇತ್ರದ ಬಂಕಾಪುರ, ಶಿಗ್ಗಾಂವ-ಸವಣೂರ ಪಟ್ಟಣದಲ್ಲಿ ಎರಡು ಸಾವಿರ ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಆರು ಸಾವಿರ ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ವಸತಿ ಸಚಿವರು ಕ್ಷೇತ್ರಕ್ಕೆ ಐದು ಸಾವಿರ ಹೆಚ್ಚುವರಿ ಮನೆಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಸರ್ಕಾರ ಸ್ಪಂದನಶೀಲವಾಗಿರಬೇಕು, ಯಾರಿಗೆ ಅವಶ್ಯಕತೆ ಇದೆ ಅಂತವರ ನೆರವಿಗೆ ಸ್ಪಂದಿಸಬೇಕು. ನಮ್ಮ ನಿರ್ಣಯಗಳು ಸಮಾಜದ ಕಟ್ಟಕಡೆಯ ಜನರ ಪರವಾಗಿರಬೇಕು. ಅವರಿಗಾಗಿ ಕಾರ್ಯಕ್ರಮ ರೂಪಿಸಬೇಕು ಹಾಗೂ ತಲುಪಿಸಬೇಕು. ಆಗ ನಿಜವಾದ ಸ್ಪಂದನಶೀಲ ಸರ್ಕಾರದ ಕ್ರಮವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಬಡವರ ಪರವಾಗಿ ಯೋಜನೆಗಳನ್ನು ರೂಪಿಸಿ ಅವುಗಳನ್ನು ತಲುಪಿಸುವ ಕೆಲಸವನ್ನು ಮಾಡಿದೆ ಎಂದರು.
ಮಹಿಳೆಯರು, ಯುವಕರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸೇರಿದಂತೆ ಎಲ್ಲ ಶೋಷಿತ ವರ್ಗಕ್ಕೆ, ದುಡಿಯುವ ವರ್ಗಕ್ಕೆ ನೆರವು ಒದಗಿಸುವ ಮೂಲಕ ಶಕ್ತಿ ತುಂಬಿದ್ದೇವೆ. ಸಾಮಾಜಿಕ ನ್ಯಾಯಾದ ಭಾಷಣ ಹೊಡೆದರೆ ಉಪಯೋಗವಿಲ್ಲ, ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಬದಲಾವಣೆ ತರಬೇಕು. ನಾವು ಯೋಜನೆಗಳ ಮೂಲಕ ಸಾಮಾಜಿಕ ಬದಲಾವಣೆಯನ್ನು ತರುವ ಪ್ರಾಮಾಣಿಕ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

ಕೇವಲ ಜಿಲ್ಲೆಯ ಜನರ ಕೆಲಸವಲ್ಲದೆ ಇಡಿ ರಾಜ್ಯಕ್ಕೆ ಅವರ ಅನುಭವದ ಆಧಾರದ ಮೇಲೆ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಇಂತಹವನ್ನು ಆಶೀರ್ವದಿಸಬೇಕು. ಶಿಗ್ಗಾಂವಿ ಜನತೆಯ ಮತ ರಾಜ್ಯದ ಮತ ರಾಜ್ಯದ ಆರುವರೆಕೋಟಿ ಜನರ ಪ್ರತಿನಿಧಿಸುವರಿಗೆ ನೀಡುವ ಮತ ಎಂದು ಭಾವಿಸಿ ಆಶೀರ್ವದಿಸುವಂತೆ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ರಾಜ್ಯ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟು ಆಯೋಗದ ಅಧ್ಯಕ ಹಾಗೂ ಶಾಸಕ ನೆಹರು ಓಲೇಕಾರ, ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಡಿ.ಎಸ್.ಮಾಳಗಿ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ, ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿ.ಪಂ ಅಕ್ಷಯ ಶ್ರೀಧರ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!