ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಳಮೀಸಲಾತಿ ನೀಡಲು ಕ್ಯಾಬಿನೆಟ್‌ನಲ್ಲಿ ಒಮ್ಮತದ ನಿರ್ಧಾರ ಮಾಡಲಾಗಿದೆ . ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಿ ಮೂರು ತಿಂಗಳಲ್ಲಿ ವರದಿ ನೀಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಒಳಮೀಸಲಾತಿ ಜಾರಿ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸೋಮವಾರದ ಕ್ಯಾಬಿನೆಟ್‌ನಲ್ಲಿ ಒಳಮೀಸಲಾತಿ ಜಾರಿಗೆ ಒಪ್ಪಲಾಗಿದೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚನೆ ಮಾಡುತ್ತೇವೆ. ಆಯೋಗವೂ 3 ತಿಂಗಳ ಒಳಗೆ ವರದಿ ಕೊಡಲಿದೆ ಎಂದರು.
ಮೀಸಲಾತಿ ನೀಡಲು ಅಂಕಿಅಂಶಗಳು ಇಲ್ಲ ಅನ್ನೋದು ಕೆಲವರ ಅಭಿಪ್ರಾಯ. ಈ ಕಾರಣಕ್ಕೆ ಅಂಕಿಅಂಶಗಳ ಸಂಗ್ರಹಕ್ಕೆ ಆಯೋಗ ರಚನೆ ಮಾಡ್ತಿದ್ದೇವೆ. ಕೂಡಲೇ ಆಯೋಗ ರಚನೆ ಮಾಡುತ್ತೇವೆ. ಅಲ್ಲಿವರೆಗೂ ಯಾವುದೇ ನೇಮಕಾತಿ ಪ್ರಕ್ರಿಯೆ ಮಾಡೋದಿಲ್ಲ. ಈಗ ಯಾವುದು ನೊಟೀಫಿಕೇಶನ್ ಆಗಿದೆಯೋ ಅದನ್ನು ಹೊರತುಪಡಿಸಿ ಹೊಸ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಮಾಡಲ್ಲ. ಜಡ್ಜ್ ಯಾರು ಅಂತ ಇವತ್ತೇ ತೀರ್ಮಾನ ಮಾಡುತ್ತೇವೆ. 3 ತಿಂಗಳಲ್ಲಿ ವರದಿ ಬರಲಿದ್ದು, ಅಲ್ಲಿಯವರೆಗೂ ಹೊಸ ನೇಮಕಾತಿ ಪ್ರಕ್ರಿಯೆ ಶುರು ಮಾಡಲ್ಲ ಎಂದು ಸ್ಪಷ್ಟನೆ ನೀಡಿದರು.