ಹೊಸದಿಂಗತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳ ಸಂಖ್ಯೆ ಹೆಚ್ಚಾಗಿದ್ದು, ಸರ್ಕಾರಿ ಬಸ್ ಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ. ಸರ್ಕಾರದ ಶಕ್ತಿ ಯೋಜನೆಯ ಸಂಪೂರ್ಣ ಪ್ರಯೋಜನ ಜಿಲ್ಲೆಯ ಮಹಿಳೆಯರಿಗೆ ದೊರಕಿಸುವ ಉದ್ದೇಶದಿಂದ, ಜಿಲ್ಲೆಯಲ್ಲಿ ಸರ್ಕಾರಿ ಬಸ್ ಗಳನ್ನು ಹೆಚ್ಚಳ ಮಾಡುವ ಕುರಿತಂತೆ ಸರ್ಕಾರದ ಗಮನ ಸೆಳೆಯಲಾಗುವುದು ಮತ್ತು ಸಾರಿಗೆ ಸಚಿವರೊಂದಿಗೆ ಚಿರ್ಚಿಸಿ, ಮುಖ್ಯ ಮಂತ್ರಿಗಳ ಗಮನಕ್ಕೆ ತರಲು ಶೀಘ್ರದಲ್ಲಿ ಪ್ರಯತ್ನಿಸುವುದಾಗಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ಅಂಗವಿಕಲ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಭಾನುವಾರ ಉಡುಪಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಜಿಲ್ಲೆಯಲ್ಲಿ ಪ್ರಸ್ತುತ ಸ್ಥಗಿತಗೊಂಡಿರುವ ನರ್ಮ್ ಬಸ್ ಗಳ ಸಂಚಾರಕ್ಕೆ ಹಾಗೂ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಸಹ ಬಸ್ ಸಂಖ್ಯೆ ಹೆಚ್ಚಳ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಗೃಹಲಕ್ಷ್ಮಿ ಯೋಜನೆ ಜಾರಿ
ಗೃಹಲಕ್ಷ್ಮಿ ಯೋಜನೆಯೂ ರೂಪುರೇಷೆ ಸಿದ್ದಗೊಳ್ಳುತ್ತಿದೆ. ನಮ್ಮ ಇಲಾಖೆಯಿಂದ ಯಾವ ರೀತಿಯಲ್ಲಿ ಕಾರ್ಯಕ್ರಮ ಮಾಡಬೇಕು ಎಂಬ ಬಗ್ಗೆ ಸಮಲೋಚನೆ ನಡೆಯುತ್ತಿದ್ದು, ನಾಳೆ ಸಂಜೆಯೊಳಗೆ ಜನತೆಗೆ ನಿಶ್ಚಲವಾದ ನಮೂನೆ ನೀಡುತ್ತೇವೆ. ನಂತರ ಈ ಬಗ್ಗೆ ಗಜೆಟ್ ನೋಟಿಫಿಕೇಶನ್ ಆಗುತ್ತದೆ. ನಾಳೆ ಅಥವಾ ನಾಡಿದ್ದು ಸಾಯಂಕಾಲದೊಳಗೆ ಗಜೆಟ್ ನೋಟಿಫಿಕೇಶನ್ ಮೂಲಕ ವಿಷಯ ತಿಳಿಯುತ್ತದೆ. ಆಗಸ್ಟ್ 15 ರಂದು ಗೃಹಲಕ್ಷ್ಮಿ ಯೋಜನೆ ಜಾರಿ ಎಂದು ತಯಾರಿ ನಡೆಸಲಾಗಿದ್ದು, ಹೆಚ್ಚೆಂದರೆ ಆಗಸ್ಟ್ 17 ಅಥವಾ 18 ರಂದು ಜಾರಿಯಾಗಲಿದೆ ಎಂದರು.
ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರು
ರಾಜಕಾರಣದಲ್ಲಿ ಸವಾಲುಗಳನ್ನು ಮೆಟ್ಟಿ ನಿಲ್ಲುವುದೇ ಜಾಣತನ. ವಿಪಕ್ಷಗಳ ಶಾಸಕರ ಸಹಕಾರವನ್ನು ಕೋರಿದ್ದೇನೆ. ಉಡುಪಿ ಜಿಲ್ಲೆಯನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗಲು ಬಂದಿದ್ದು, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರ ಸರಕಾರಕ್ಕೆ ಒಳ್ಳೆಯ ಹೆಸರು ನೀಡಲು ಬಂದಿದ್ದೇನೆ. ನನ್ನ ಮೇಲೆ ಭರವಸೆ ಇಟ್ಟು ಮಹಿಳೆಯನ್ನು ಉಡುಪಿ ಜಿಲ್ಲೆಗೆ ಉಸ್ತುವಾರಿ ಮಾಡಿದ್ದಾರೆ. ಅಭಿವೃದ್ಧಿಯ ಬಗ್ಗೆ ನನ್ನ ಫೋಕಸ್ ಇರುತ್ತದೆ. ಜಿಲ್ಲಾ ಕಾಂಗ್ರೆಸ್ ಸಂಘಟಿಸುವ ಜವಾಬ್ದಾರಿಯೂ ಇದ್ದು, ಸಂಘಟನೆಯಲ್ಲಿ ಚುರುಕು ಬರುವಂತೆ ಕೆಲಸ ಮಾಡುತ್ತೇನೆ ಎಂದವರು ಹೇಳಿದರು.
ಪಂಚಾಯತ್ ಮಟ್ಟದಲ್ಲಿ ತಿರುಗಾಟ
ರಾಜ್ಯದ ಜನತೆಗೆ ನೀಡಿದ ಆಶ್ವಾಸನೆಯ ಐದು ಗ್ಯಾರಂಟಿಗಳಲ್ಲಿ ಒಂದು ಇಂದು ಈಡೇರಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಆಗಿ ಉಡುಪಿಯಲ್ಲಿ ಉದ್ಘಾಟನೆ ಮಾಡಲು ಸಂತೋಷವಾಗುತ್ತಿದೆ. ಇಲ್ಲಿನ ಜನರು ಬಹಳ ಮೃದು ಹಾಗೂ ಸುಸಂಸ್ಕೃತರು.ಎಲ್ಲರನ್ನು ಜೊತೆಯಾಗಿ ತೆಗೆದುಕೊಂಡು ಪ್ರಗತಿ ಕೆಲಸ ಮಾಡುತ್ತೇನೆ. ಶ್ರೀ ಕೃಷ್ಣ ಪರಮಾತ್ಮ ಹಾಗೂ ಉಚ್ಚಿಲ ಮಹಾಲಕ್ಷ್ಮಿ ದೇವಿಯ ಆಶೀರ್ವಾದ ಪಡೆದಿದ್ದೇನೆ. ಬೆಳಗಾವಿ, ಉಡುಪಿ , ಇಡೀ ರಾಜ್ಯ, ನನ್ನ ಕ್ಷೇತ್ರ ಸಂಚಾರ ಮಾಡಬೇಕು. ತಿಂಗಳಿಗೆ ಎರಡು ಬಾರಿ ಜಿಲ್ಲೆಗೆ ಬರಬೇಕು ಎಂಬ ಆಸೆ ಇದ್ದು, ಕನಿಷ್ಠ ಒಂದು ಬಾರಿಯಾದರೂ ಬಂದು ತಾಲೂಕು ಮಟ್ಟದವರೆಗೂ ಹೋಗಿ ತಿರುಗಾಟ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಪಂಚಾಯತ್ ಮಟ್ಟಕ್ಕೂ ಹೋಗಿ ತಿರುಗಾಟ ಮಾಡುತ್ತೇನೆ ಎಂದರು.