ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನನಗರ್ತಪೇಟೆಯಲ್ಲಿ ಸಂಭವಿಸಿರುವ ಅಗ್ನಿ ದುರಂತದಲ್ಲಿ ಐವರು ಸಾವನ್ನಪ್ಪಿದ್ದಾರೆ.ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಇಲ್ಲಿ ಅವೈಜ್ಞಾನಿಕವಾಗಿ ಕಟ್ಟಡಗಳನ್ನು ಕಟ್ಟಿದ್ದಾರೆ. ಅನಧಿಕೃತ ಕಟ್ಟಡಗಳಿಗೆ ನೊಟೀಸ್ನೀಡುವಂತೆ ಬಿಬಿಎಂಪಿ ಸೂಚನೆ ನೀಡಿದ್ದು, ಅಕ್ರಮವಾಗಿ ಕಟ್ಟಡ ನಿರ್ಮಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಅಗ್ನಿ ಅವಘಡ ಸಂಭವಿಸಿದ ಕಟ್ಟಡ ಪರಿಶೀಲನೆ ಮಾಡಿದರು. ದುರಂತ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಕ್ರವಾಗಿ ಈ ಕಟ್ಟಡ ಕಟ್ಟಲಾಗಿದೆ. ಈ ಪರಿಸ್ಥಿತಿಗೆ ನಮ್ಮ ಸಾರ್ವಜನಿಕರನ್ನೇ ದೂರಬೇಕು ಎಂದಿದ್ದಾರೆ.
ಅವಘಡ ಸಂಭವಿಸಿದಾಗ ಅಗ್ನಿಶಾಮಕ ವಾಹನ ಬರುವುದಕ್ಕೆ ಆಗಿಲ್ಲ. ಒಂದೂವರೆ ಕಿಲೋ ಮೀಟರ್ನಿಂದ ನೀರು ತಂದು ಹಾಕಿದ್ದಾರೆ. ಈ ದುರಂತದಲ್ಲಿ ಮೃತಪಟ್ಟವರು ರಾಜಸ್ಥಾನ ಮೂಲದವರು. ಈಗಾಗಲೇ ಈ ಬಿಲ್ಡಿಂಗ್ ಮಾಲಿಕರಿಗೆ ನೊಟೀಸ್ ನೀಡಿ ಅರೆಸ್ಟ್ ಮಾಡಲಾಗಿದೆ. ಅಕ್ರಮವಾಗಿ ಕಟ್ಟಡ ಕಟ್ಟುವವರಿಗೆ ನೊಟೀಸ್ ನೀಡಬೇಕು. ಇಲ್ಲಿ ಒಂದು ಬಿಲ್ಡಿಂಗ್ ಬಿದ್ದರೆ ಅಕ್ಕ-ಪಕ್ಕದ ಕಟ್ಟಡಗಳು ಬೀಳುತ್ತೆ ಎಂದರು.
ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡುತ್ತೇವೆ. ಬಾಡಿಗೆ ಮಾತ್ರ ತೆಗೆದುಕೊಳ್ಳುತ್ತೀರಾ ಅಂದರೆ ಸೇಫ್ಟಿ ಮಾಡಬೇಕು. ಸೇಫ್ಟಿ ಮಾಡಿಕೊಳ್ಳಲಿಲ್ಲ ಅಂದರೆ ಕಟ್ಟಡ ಮಾಲೀಕರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.