ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಸಿಐ ಮಾನ್ಯತೆ ರದ್ದಾದ ಹಿನ್ನೆಲೆ ಗಡಿಪಾರು ಭೀತಿಯಲ್ಲಿದ್ದ ಸ್ಯಾಂಡಲ್ವುಡ್ ನಟ ಚೇತನ್‌ಗೆ ಹೈಕೋರ್ಟ್ ರಿಲೀಪ್ ನೀಡಿದೆ.
ಕೇಂದ್ರ ಸರ್ಕಾರ ನಟನ ಒಸಿಐ ಮಾನ್ಯತೆ ರದ್ದು ಮಾಡುವುದಾಗಿ ನೋಟಿಸ್ ಕಳುಹಿಸಿತ್ತು. ಆದರೆ ಈಗ ಹೈಕೋರ್ಟ್ ಈ ವಿಚಾರವಾಗಿ ನಟನಿಗೆ ಷರತ್ತುಬದ್ಧ ರಿಲೀಫ್ ಕೊಟ್ಟಿದೆ.
2018ರಲ್ಲಿ ನಟ ಚೇತನ್ ಅವರಿಗೆ ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ನೀಡಲಾಗಿತ್ತು. ಆದರೆ ನಟ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ,
ಭಾರತ ವಿರೋಧಿ ಚಟುವಟಿಕೆ ಆರೋಪಗಳಿರುವ ಹಿನ್ನೆಲೆಯಲ್ಲಿ ನಟನಿಗೆ ಕೇಂದ್ರ ಸರ್ಕಾರ ನಟನಿಗೆ ನೋಟಿಸ್ ನೀಡಿ ಉತ್ತರ ಪಡೆದಿತ್ತು. ಚೇತನ್ ನೀಡಿದ್ದ ಉತ್ತರ ಸಮಾಧಾನಕರವಾಗಿಲ್ಲದ ಹಿನ್ನೆಲೆ ಒಸಿಐ ಕಾರ್ಡ್ ರದ್ದುಪಡಿಸಿತ್ತು. ಚೇತನ್ ವಾದ ಆಲಿಸದೇ ಕ್ರಮ ಕೈಗೊಂಡಿದ್ದು ಸರಿಯಲ್ಲವೆಂದು ಅವರ ಪರ ವಕೀಲರು ವಾದಿಸಿದ್ದಾರೆ.
ಚೇತನ್ ಅವರು ನ್ಯಾಯಾಂಗದ ವಿರುದ್ಧವೂ ಆಕ್ಷೇಪಾರ್ಹ ಹೇಳಿಕೆ ನೀಡಿರುವುದರಿಂದ ಕೇಂದ್ರದ ಕ್ರಮಕ್ಕೆ ತಡೆ ನೀಡಬಾರದು ಎಂದು ಎಎಜಿ ಅರುಣ್ ಶ್ಯಾಮ್, ಎಎಸ್ಜಿ ಶಾಂತಿಭೂಷಣ್ ವಾದ ಮಂಡಿಸಿದರು. ಆದರೆ ಅಂತಿಮವಾಗಿ ಚೇತನ್ ಅವರಿಗೆ ನ್ಯಾಯಾಲಯ ಷರತ್ತು ಬದ್ಧ ರಿಲೀಫ್ ನೀಡಿದೆ.
ನ್ಯಾಯಾಂಗದ ಬಗ್ಗೆ ಚೇತನ್ ಟ್ವೀಟ್ ಮಾಡುವಂತಿಲ್ಲ. ವಿಚಾರಣೆಗೆ ಬಾಕಿಯಿರುವ ಕೇಸ್ಗಳ ಬಗ್ಗೆ ಕೂಡ ಅವರು ಪೋಸ್ಟ್ ಮಾಡುವಂತಿಲ್ಲ ಎಂದು ಷರತ್ತು ವಿಧಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.