ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂತಾರಾಧನೆ ಹಿಂದು ಸಂಪ್ರದಾಯ ಅಲ್ಲವೆಂದ ನಟ ಚೇತನ್‌ಗೆ ಪ್ರತಿಕ್ರಿಯೆ ಕೊಡುತ್ತೇವೆ… ಮೂಲ ಆರಾಧನೆ ಪಂಜುರ್ಲಿ ದೈವದ ಮುಂದೆ ಈ ಬಗ್ಗೆ ಪ್ರಾರ್ಥನೆ ಸಲ್ಲಿಸುತ್ತೇವೆ… ಹೀಗೆಂದು ಉಡುಪಿ ಜಿಲ್ಲೆಯ ಹಿರಿಯ ದೈವ ನರ್ತಕ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ ಚೇತನ್ ಬಹಳ ದೊಡ್ಡ ಜ್ಞಾನಿ ಆಗಿರಬಹುದು. ಆದರೆ ನಮ್ಮ ನೆಲ, ನಮ್ಮ ಕುಲ, ನಮ್ಮ ಆಚರಣೆ ಬಗ್ಗೆ ಮಾತನಾಡುವ ಜ್ಞಾನ ಇವರಿಗಿಲ್ಲ. ನಾವು ದೈವಾರಾಧಕರು ನಮಗೆ ನಟಿಸಲು ಗೊತ್ತಿಲ್ಲ. ತಲೆತಲಾಂತರಗಳಿಂದ ಸತ್ಯವನ್ನು ಪಾಲನೆ ಮಾಡಿಕೊಂಡು ಬಂದಿದ್ದೇವೆ ಎಂದು ಹೇಳಿದ್ದಾರೆ.
ಸಂಸ್ಕೃತಿಗೆ ಅವಹೇಳನ ಆದಾಗೆಲ್ಲ ನಾವು ದೈವದ ಮುಂದೆ ಪ್ರಾರ್ಥನೆ ಮಾಡುತ್ತೇವೆ. ವ್ಯಕ್ತಿಗತವಾಗಿ ಇವರಿಗೆ ನಾವು ಉತ್ತರ ಕೊಡುವುದಿಲ್ಲ. ನಾವು ನಂಬಿಕೊಂಡ ಸತ್ಯದ ಮೂಲಕ ಭೂತಾರಾಧನೆ ಹಿಂದು ಸಂಪ್ರದಾಯ ಅಲ್ಲವೆಂದ ಚೇತನ್‌ಗೆ ಪ್ರತಿಕ್ರಿಯೆ ಕೊಡುತ್ತೇವೆ. ಮೂಲ ಆರಾಧನೆ ಪಂಜುರ್ಲಿ ದೈವದ ಮುಂದೆ ಈ ಬಗ್ಗೆ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದ ಅವರು, ದೈವಾರಾಧನೆಗೆ ಇಂತಿಷ್ಟು ವರ್ಷದ ದಾಖಲೆ ಇಲ್ಲ. ಯಾವುದೋ ಒಂದು ಪುಸ್ತಕ ಹಿಡಿದುಕೊಂಡು ಮಾತನಾಡುವುದು ತಪ್ಪು.
ಕರಾವಳಿಯಾದ್ಯಂತ ಪರವ, ಪಂಬದ, ನಲಿಕೆಯವರು ಜೀವಿಸುತ್ತಿದ್ದೇವೆ. ನಾವು ಅಲೆಮಾರಿಗಳು ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಹಿರಿಯರ ಕಾಲದಿಂದಲೂ ಹಿಂದೂ ಸಂಪ್ರದಾಯ ಪಾಲಿಸಿ, ದೈವಾರಾಧನೆ ಮಾಡಿಕೊಂಡು ಬರುತ್ತಿದ್ದೇವೆ ಎಂದರು.