ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರುವ ನಟ ದರ್ಶನ್ ಜಾಮೀನು ಸಿಗದೇ ಕಂಗೆಟ್ಟಿದ್ದು, ತಮ್ಮ ಕುಟುಂಬವನ್ನು ಭೇಟಿಯಾಗಲು ಹರಸಾಹಸ ಪಡುತ್ತಿದ್ದಾರೆ.
ಜೈಲಿನ ಒಳಗಡೆ ಭೇಟಿಗೆ ಮನವಿ
ಈ ಹಿನ್ನೆಲೆ ಜೈಲಿನ ಸೂಪರಿಂಟೆಂಡೆಂಟ್‌ಗೆ (ಎಸ್ಪಿ) ವಿಶೇಷ ಪತ್ರ ಬರೆದಿರುವ ಅವರು, ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಅವರನ್ನು ಜೈಲಿನ ಒಳಗಡೆ ಭೇಟಿ ಮಾಡಲು ವಿಶೇಷ ಅವಕಾಶ ನೀಡಬೇಕಾಗಿ ಮನವಿ ಮಾಡಿದ್ದಾರೆ.
ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಪತ್ರ
ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಅವರ ಜಾಮೀನು ಅರ್ಜಿ ವಜಾಗೊಂಡಿದ್ದು, ಈ ಬೆನ್ನಲ್ಲೇ ಮೇ 15 ರಂದು ಅವರು ಕಾರಾಗೃಹದ ಮುಖ್ಯ ಅಧೀಕ್ಷಕರಾದ ಅಂಶು ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಸಾಮಾನ್ಯವಾಗಿ ಜೈಲಿನ ನಿಯಮಾವಳಿಗಳ ಪ್ರಕಾರ ಸಾಮಾನ್ಯ ಸಂದರ್ಶನದ ಅವಧಿಯಲ್ಲಿ ಭೇಟಿಯಾಗಲು ಅವಕಾಶವಿದೆ. ಆದರೆ ಇದೀಗ ಜೈಲಿನ ಒಳಗಿರುವ ಪ್ರತ್ಯೇಕ ಕೊಠಡಿಯಲ್ಲಿ ಪತ್ನಿ ಮತ್ತು ಮಗನನ್ನು ಭೇಟಿ ಮಾಡಲು ಅನುಮತಿ ಕೋರಿದ್ದಾರೆ.
ಸಿಗಲಿದೆಯೇ ಅನುಮತಿ?
ಸದ್ಯ ದರ್ಶನ್ ಈ ವಿಶೇಷ ಮನವಿಗೆ ಜೈಲು ಆಡಳಿತ ಮಂಡಳಿ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಕೊಠಡಿಯ ಒಳಗೆ ಪ್ರತ್ಯೇಕ ಭೇಟಿಗೆ ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಕಾರಾಗೃಹದ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ .



