September 10, 2026
Thursday, September 10, 2026
spot_img

ಬಹುಕೋಟಿ ವಂಚನೆ ಪ್ರಕರಣ: ಕಿಂಗ್ ಪಿನ್ ಶಿವಾನಂದ ನೀಲಣ್ಣವರ 10 ದಿನ ಸಿಐಡಿ ಕಸ್ಟಡಿಗೆ

ಹೊಸದಿಗಂತ ವರದಿ ಬೆಳಗಾವಿ:

ಬಹುಕೋಟಿ ಹಗರಣದ ಕಿಂಗ್ ಪಿನ್ ಶಿವಾನಂದ ನೀಲಣ್ಣವರನ್ನು ನ್ಯಾಯಾಲಯ 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿಸಿದೆ. ವಿಚಾರಣೆ ವೇಳೆ ಕೋರ್ಟ್ ಹಾಲ್ನಲ್ಲಿ ನ್ಯಾಯಾಧೀಶರು ಹಾಗೂ ಆರೋಪಿ ನಡುವೆ ಮಹತ್ವದ ಸಂಭಾಷಣೆ ನಡೆದಿದ್ದು, ಸದ್ಯ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ.

ಸಿಐಡಿ ಅಧಿಕಾರಿಗಳು ಕೋರಿಕೆ

ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗಂಗಾಧರ್ ಕೆ.ಎನ್. ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಸುಮಾರು 35 ಸಾವಿರ ಹೂಡಿಕೆದಾರರ 1 ಸಾವಿರ ಕೋಟಿ ರೂಪಾಯಿ ಹಗರಣ ಇದಾಗಿದ್ದು, ರಾಜ್ಯ ಹಾಗೂ ಹೊರರಾಜ್ಯಗಳಿಗೂ ತೆರಳಿ ತನಿಖೆ ನಡೆಸಬೇಕಿರುವುದರಿಂದ ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಕೋರಿದ್ದರು.

ಇದೇ ವೇಳೆ ಆರೋಪಿ ತನಗೆ ಶುಗರ್ ಮತ್ತು ಹಾರ್ಟ್ ಪ್ರಾಬ್ಲಮ್ ಇರುವುದಾಗಿ ಹೇಳಿಕೊಂಡಾಗ, ವೈದ್ಯಕೀಯ ವ್ಯವಸ್ಥೆ ಕಲ್ಪಿಸಲು ನ್ಯಾಯಾಧೀಶರು ಸೂಚಿಸಿದರು. ಇನ್ನು “35 ಸಾವಿರ ಜನರಿಗೆ ಹಣ ಬೇಕಿಲ್ ನಾನು ಬೇಕಾಗಿದ್ದೇನೆ” ಎಂದ ಆರೋಪಿಗೆ ತಿರುಗೇಟು ನೀಡಿದ ನ್ಯಾಯಾಧೀಶರು, “ಅಮಾಯಕ ಜನರ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ, ಸಾಕಷ್ಟು ಜನ ಹಣ ತಗೊಂಡು ಓಡಿಹೋಗಿದ್ದಾರೆ. ಇತಿಹಾಸದಿಂದ ಪಾಠ ಕಲಿಯಲು ಈ ಕಾನೂನು ತಂದಿದ್ದಾರೆ, ಧರ್ಮೋ ರಕ್ಷತಿ ರಕ್ಷಿತಃ” ಎಂದು ಶ್ಲೋಕದ ಉದಾಹರಣೆ ನೀಡಿ ಬುದ್ಧಿವಾದ ಹೇಳಿದರು. ಕೊನೆಗೆ ಕೋರ್ಟ್ ಹಾಲ್ನಿಂದ ಹೊರಬರುತ್ತಿದ್ದಂತೆ ಸಹೋದರನನ್ನು ಕಂಡು ಶಿವಾನಂದ ನೀಲಣ್ಣವರ್ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ:

ಸಿಐಡಿ ಡಿಜಿಪಿ ಭೀಮಾಶಂಕರ ಗುಳೇದ್ ನೇತೃತ್ವದ ತಂಡ ಈಗಾಗಲೇ ಪ್ರಾಥಮಿಕ ತನಿಖೆ ಮುಗಿಸಿದ್ದು, ಮಾಳಮಾರುತಿ ಪೊಲೀಸರು ಕಲೆಹಾಕಿದ್ದ ಎಲ್ಲಾ ಮಹತ್ವದ ದಾಖಲೆಗಳೊಂದಿಗೆ ಆರೋಪಿಯನ್ನು ಸೋಮವಾರ ಬೆಂಗಳೂರಿಗೆ ಕರೆದೊಯ್ದು ವಿಚಾರಣೆ ನಡೆಸಲಿದ್ದಾರೆ.

ಗ್ರಾಹಕರು ಯಾರೂ ದೂರು ನೀಡಿಲ್ಲ

ಹೂಡಿಕೆದಾರರ ಹಣ ನೀಡಲು ರೆಡಿ ಇದ್ದಾರೆ ಎಂಬ ಆರೋಪಿ ಪರ ವಕೀಲರ ವಾದವನ್ನು ಸದ್ಯಕ್ಕೆ, ಆಲಿಸಲು ನ್ಯಾಯಾಧೀಶರು ನಿರಾಕರಿಸಿದ್ದರು, ಇನ್ನೊಂದೆಡೆ, ಆರೋಪಿ ಪರ ವಕೀಲರಾದ ಮಂಜುನಾಥ ಜಿ.ಎಲ್. ಅವರು, ಇದು ಕೇವಲ ತಾಂತ್ರಿಕ ಕಾರಣಗಳಿಗಾಗಿ ಆರ್ಬಿಐ ಗೈಡ್ಲೈನ್ಸ್ ಉಲ್ಲಂಘನೆಯಾಗಿದೆ ಎಂದು ಪೊಲೀಸರೆ ದಾಖಲಿಸಿರುವ ಸುಮೋಟೋ ಕೇಸ್ ಆಗಿದೆ. ಗ್ರಾಹಕರು ಯಾರೂ ದೂರು ನೀಡಿಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ. ವಿರೋಧಿಗಳು ತಪ್ಪು ಮಾಹಿತಿ ಹರಡುತ್ತಿದ್ದು ಈಗಾಗಲೇ ಬೇಲ್ ಗಾಗಿ ಅರ್ಜಿ ಸಲ್ಲಿಸಿದ್ದೇವೆ” ಎಂದು ಶಿವಾನಂದ ನೀಲಣ್ಣವರ ಪರ ವಕೀಲರು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !