ತನ್ನ ಚಿತ್ರಕ್ಕೆ ಬಂಡವಾಳ ಹೂಡಿದ ನಿರ್ಮಾಪಕನ ವಿರುದ್ಧವೇ ದೂರು ದಾಖಲಿಸಿದ ನಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತನ್ನ ಚಿತ್ರಕ್ಕೆ ಬಂಡವಾಳ ಹೂಡಿದ ನಿರ್ಮಾಪಕನ ವಿರುದ್ಧವೇ ನಟ ಹಾಗೂ ನಿರ್ದೇಶಕ ರೂಪೇಶ್​ ರಾಜ್​, ವಂಚನೆ ಆರೋಪದಡಿ ದೂರು ದಾಖಲಿಸಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಧೂಳೀಪಟ ಹಾಗೂ ಸಾರಿ ಕಣೇ ಎಂಬ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಗಿರೀಶ್ ವಿರುದ್ಧ ನಟ ರೂಪೇಶ್ ದೂರು ನೀಡಿದ್ದಾರೆ. ಹಣ ವಾಪಸ್​ ಕೇಳಿದರೆ ಚಾಕುವಿನಿಂದ ಚುಚ್ಚಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ನಿರ್ಮಾಣ ಮಾಡಿರುವ ಎರಡೂ ಚಿತ್ರಗಳು ಹೀನಾಯ ಸೋಲು ಅನುಭಿವಿಸಿದ್ದರಿಂದ ನಿರ್ಮಾಪಕ ಗಿರೀಶ್​ ಹಣ ಕಳೆದುಕೊಂಡಿದ್ದಾರಂತೆ. ಚಿತ್ರೀಕರಣದ ಸಮಯದಲ್ಲಿ ಹಣವಿಲ್ಲ ಎಂದು ಹೇಳಿ ನಟ ರೂಪೇಶ್ ರಾಜ್ ಬಳಿ ಕೇಳಿದ್ದರಂತೆ. ಈ ಹಿನ್ನಲೆ ರೂಪೇಶ್​ 33 ಲಕ್ಷ ರೂ. ಹಣ ನೀಡಿದ್ದರು ಎನ್ನಲಾಗಿದೆ. ಅಲ್ಲದೆ ರೂಪೇಶ್​ ನೀಡಿದ ಜಾಮೀನಿನ ಮೇಲೆ ಬಾಗಲಕೋಟೆಯ ಶಿರಗಣ್ಣನವರ್ ಎಂಬಾತನಿಂದ 40 ಲಕ್ಷ ಹಾಗೂ ಬಿ.ವಿ. ಲೋಕೇಶ್ ಎಂಬುವವರ ಬಳಿ 60 ಲಕ್ಷ ರೂ. ಸಾಲ ಪಡೆದಿದ್ದಾರೆ ಎಂದು ರೂಪೇಶ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದೀಗ ಹಣ ವಾಪಸ್ ಕೇಳಿದರೆ ಗಿರೀಶ್ ಮತ್ತು ಆತನ ಗ್ಯಾಂಗ್ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಗಿರೀಶ್ ಹಣ ನೀಡಿಯೇ ಇಲ್ಲ ಎಂದು ಬರೆದುಕೊಡು ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ರೂಪೇಶ್​ ಆರೋಪಿಸಿದ್ದಾರೆ.

ರೂಪೇಶ್​ ದೂರಿನ ಹಿನ್ನೆಲೆಯಲ್ಲಿ ನಿರ್ಮಾಪಕ ಗಿರೀಶ್, ಅಂಜುಂ, ವಿಕೆ ಮೂರ್ತಿ ಹಾಗೂ ಮೋಹನ್ ಎಂಬುವವರ ಮೇಲೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!