200 ಕೋಟಿ ರೂ. ಡೀಲ್‌ ಕೇಸ್‌:‌ ಬಂಧನ ಭೀತಿಯಲ್ಲಿದ್ದ ನಟಿ ಜಾಕ್ವೆಲಿನ್ ಗೆ ಕೊಂಚ ರಿಲೀಫ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸುಕೇಶ್ ಚಂದ್ರಶೇಖರ್ ವಿರುದ್ಧದ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ ಗೆ ಸೋಮವಾರ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಜಾಕ್ವೆಲಿನ್‌ ಗೆ 50,000 ರೂಪಾಯಿಗಳ ಬಾಂಡ್‌ಗೆ ಒಳಪಟ್ಟು ಮಧ್ಯಂತರ ಜಾಮೀನು ನೀಡಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೇಂದರ್ ಮಲಿಕ್ ಅವರು ನಟಿಯ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತು ಜಾರಿ ನಿರ್ದೇಶನಾಲಯದಿಂದ (ಇಡಿ) ಪ್ರತಿಕ್ರಿಯೆ ಕೇಳಿದರು. ಆ ಬಳಿಕ ಜಾಮೀನು ಮಂಜೂರು ಮಾಡಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 22 ರಂದು ನಡೆಯಲಿದೆ.
ಇದಕ್ಕೂ ಮುನ್ನ ಸುಕೇಶ್ ವಿರುದ್ಧದ ಪ್ರಕರಣದ ತನಿಖೆ ನಡೆಸುತ್ತಿರುವ ಇಡಿ ಆಕೆಯನ್ನು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಆಗಸ್ಟ್ 17 ರಂದು ತನಿಖಾ ಸಂಸ್ಥೆಯು ಜಾಕ್ವೆಲಿನ್‌ ಸಹ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ನಟಿಗೆ ಬಂಧನ ಭೀತಿ ಶುರುವಾಗಿತ್ತು.
ನಟ ಸುಕೇಶ್ ಚಂದ್ರಶೇಖರ್ ಅವರು ಜಾಕ್ವೆಲಿನ್‌ಗೆ 7 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಅವರು ನಟ ಮತ್ತು ಅವರ ಕುಟುಂಬ ಸದಸ್ಯರಿಗೆ ಹಲವಾರು ದುಬಾರಿ ಕಾರುಗಳು, ದುಬಾರಿ ಬ್ಯಾಗ್‌ಗಳು, ಬಟ್ಟೆಗಳು, ಶೂಗಳು ಮತ್ತು ದುಬಾರಿ ವಾಚ್‌ಗಳನ್ನು ಉಡುಗೊರೆಯಾಗಿ ನೀಡಿದ್ದರು.
ಪ್ರಸ್ತುತ ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್, ಫೋರ್ಟಿಸ್ ಹೆಲ್ತ್‌ಕೇರ್ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಂತಹ ದೊಡ್ಡ ಉದ್ಯಮಿಗಳನ್ನು ವಂಚಿಸಿದ ಆರೋಪ ಹೊತ್ತಿದ್ದಾರೆ.
ಈ ಹಿಂದೆ ಇಡಿಗೆ ನೀಡಿದ ಹೇಳಿಕೆಯಲ್ಲಿ, ಜಾಕ್ವೆಲಿನ್, ಸುಕೇಶ್ ತನ್ನನ್ನು ಸನ್ ಟಿವಿಯ ಮಾಲೀಕ ಮತ್ತು ಚೆನ್ನೈನ ಪ್ರಭಾವಿ ರಾಜಕೀಯ ಕುಟುಂಬದ ಸದಸ್ಯ ಎಂದು ಪರಿಚಯಿಸಿಕೊಂಡಿದ್ದಾನೆ ಎಂದು ಹೇಳಿದ್ದರು. ಸುಕೇಶ್ ಚಂದ್ರಶೇಖರ್ ಅವರಿಂದ ಪ್ರತಿ ವಾರ ಸೀಮಿತ ಆವೃತ್ತಿಯ ಸುಗಂಧ ದ್ರವ್ಯಗಳು, ಪ್ರತಿ ದಿನ ಹೂವುಗಳು, ಡಿಸೈನರ್ ಬ್ಯಾಗ್‌ಗಳು, ಡೈಮಂಡ್ ಕಿವಿಯೋಲೆಗಳು ಮತ್ತು ಮಿನಿ ಕೂಪರ್ ಅನ್ನು ಸ್ವೀಕರಿಸಿದ್ದೇನೆ ಎಂದು ಜಾಕ್ವೆಲಿನ್ ದಾಖಲೆಯಲ್ಲಿ ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!