September 23, 2026
Wednesday, September 23, 2026
spot_img

ರಾಷ್ಟ್ರ ಪ್ರಶಸ್ತಿಯೊಂದಿಗೆ ಲಾಲ್‌ಬಾಗ್ಚಾ ರಾಜನ ಚರಣಕ್ಕೆ ಶಿರಬಾಗಿದ ನಟ ಕಾರ್ತಿಕ್ ಆರ್ಯನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರರಂಗದಲ್ಲಿ ಯಾವುದೇ ಹಿನ್ನೆಲೆಯಿಲ್ಲದೆ ಬಂದು, ಸ್ವಪ್ರಯತ್ನದಿಂದಲೇ ದೊಡ್ಡ ಎತ್ತರಕ್ಕೆ ಬೆಳೆದ ಬಾಲಿವುಡ್ ನ ನಟ ಕಾರ್ತಿಕ್ ಆರ್ಯನ್ ಅವರ ಜೀವನದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ನೆಟ್ಟಿದೆ. ‘ಚಂದು ಚಾಂಪಿಯನ್’ ಸಿನಿಮಾದ ಅಮೋಘ ಅಭಿನಯಕ್ಕಾಗಿ ಅವರಿಗೆ ದೇಶದ ಅತ್ಯುನ್ನತ ‘ರಾಷ್ಟ್ರಪ್ರಶಸ್ತಿ (ಅತ್ಯುತ್ತಮ ನಟ)’ ಲಭಿಸಿದೆ. ಈ ಪ್ರಸಿದ್ದ ಪ್ರಶಸ್ತಿಯನ್ನು ಸ್ವೀಕರಿಸಿದ ಮರುದಿನವೇ, ಕಾರ್ತಿಕ್ ಮುಂಬೈನ ಪ್ರಖ್ಯಾತ ಲಾಲ್‌ಬಾಗ್‌ಚಾ ರಾಜನ (ಗಣಪತಿ) ಬಳಿ ತೆರಳಿ, ತಮ್ಮ ಪ್ರಶಸ್ತಿಯನ್ನು ದೇವರಿಗೆ ಅರ್ಪಿಸಿ ಭಕ್ತಿಪೂರ್ವಕ ಆಶೀರ್ವಾದ ಪಡೆದಿದ್ದಾರೆ.

ಬುಧವಾರದಂದು ಸಾಂಪ್ರದಾಯಿಕ ನೀಲಿ ಕುರ್ತಾ ಧರಿಸಿ ಲಾಲ್‌ಬಾಗ್‌ಚಾ ರಾಜನ ಮಂಟಪಕ್ಕೆ ಆಗಮಿಸಿದ ಕಾರ್ತಿಕ್, ತಾವು ಪಡೆದ ರಾಷ್ಟ್ರಪ್ರಶಸ್ತಿಯನ್ನು ಗಣೇಶನ ಪಾದಗಳ ಬಳಿ ಇಟ್ಟು ಪ್ರಣಾಮ ಸಲ್ಲಿಸಿದರು. “ನನ್ನ ವಿಘ್ನನಿವಾರಕ, ಸುಖಕರ್ತ ದುಃಖಹರ್ತ ಬಪ್ಪನ ಕೃಪೆಯಿಂದ ಇದು ಸಾಧ್ಯವಾಗಿದೆ. ಮಾತಿನಲ್ಲಿ ಹೇಳಲಾಗದಷ್ಟು ಧನ್ಯತಾಭಾವ ನನ್ನಲ್ಲಿದೆ” ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಭಾರತಕ್ಕೆ ಪ್ಯಾರಾಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕ ತಂದುಕೊಟ್ಟ ಮುರುಳಿಕಾಂತ್ ಪೇಟ್ಕರ್ ಅವರ ನೈಜ ಜೀವನದ ಆಧಾರಿತ ಚಿತ್ರವೇ ‘ಚಂದು ಚಾಂಪಿಯನ್’. ಕಬೀರ್ ಖಾನ್ ನಿರ್ದೇಶನದ ಈ ಕ್ರೀಡಾ ಬಯೋಪಿಕ್‌ನಲ್ಲಿ ಕಾರ್ತಿಕ್ ಆರ್ಯನ್ ತಮ್ಮ ದೇಹವನ್ನು ಪೂರ್ತಿ ದಂಡಿಸಿ, ಅಸಾಧಾರಣ ನಟನೆಯನ್ನು ಹೊರಹಾಕಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ನಿರೀಕ್ಷಿತ ಗಳಿಕೆ ಮಾಡದಿದ್ದರೂ, ಕಾರ್ತಿಕ್ ಅವರ ಅಭಿನಯ ಮತ್ತು ಅವರ ಕಠಿಣ ಪರಿಶ್ರಮಕ್ಕೆ ದೇಶಾದ್ಯಂತ ಅಪಾರ ಪ್ರಶಂಸೆ ವ್ಯಕ್ತವಾಗಿತ್ತು. ಈ ಬಾರಿಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಕಾರ್ತಿಕ್, ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ (ಬ್ರಮಯುಗಂ ಚಿತ್ರಕ್ಕಾಗಿ) ಅವರೊಂದಿಗೆ ಜಂಟಿಯಾಗಿ ಹಂಚಿಕೊಂಡಿದ್ದಾರೆ.

https://www.instagram.com/reel/Ddl_aSEtzXF/?utm_source=ig_web_button_share_sheet

ಪ್ರಶಸ್ತಿ ಸ್ವೀಕರಿಸಿದ ಕ್ಷಣದ ವೀಡಿಯೊ ಹಂಚಿಕೊಂಡ ಕಾರ್ತಿಕ್, ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ, “ಸಣ್ಣ ಊರಿನಲ್ಲಿದ್ದು ನಟನಾಗಬೇಕೆಂದು ಕನಸು ಕಂಡಾಗ, ಸುತ್ತಮುತ್ತಲಿನ ಜನರು ನಕ್ಕು ಕಾಲೆಳಿಯುತ್ತಿದ್ದರು. ಆದರೆ ಗ್ವಾಲಿಯರ್‌ನ ಆ ‘ಅಮ್ಮನ ಮಗ’ ಇವತ್ತು ಭಾರತದ ಅತ್ಯುನ್ನತ ನಟನ ಪ್ರಶಸ್ತಿಯನ್ನು ಕೈಯಲ್ಲಿ ಹಿಡಿದು ನಿಂತಿದ್ದಾನೆ! ಈ ಪ್ರಯಾಣ ಬಹಳ ನೋವಿನಿಂದ ಕೂಡಿತ್ತು, ಆದರೆ ಅದರ ಫಲಿತಾಂಶ ಮಾತ್ರ ‘ರಸಮಲೈ’ಗಿಂತಲೂ ಸಿಹಿಯಾಗಿದೆ. ನನ್ನ ಮೇಲೆ ನಂಬಿಕೆಯಿಟ್ಟ ನಿರ್ದೇಶಕ ಕಬೀರ್ ಖಾನ್, ನಿರ್ಮಾಪಕ ಸಾಜಿದ್ ನಡಿಯಾಡ್ವಾಲಾ ಹಾಗೂ ಪ್ರತಿಯೊಂದು ಹಂತದಲ್ಲೂ ಬೆಂಬಲವಾಗಿ ನಿಂತ ನನ್ನ ಪೋಷಕರು ಮತ್ತು ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು.” ಎಂದು ತಿಳಿಸಿದ್ದಾರೆ.

https://www.instagram.com/p/Ddn4WKEhp5N/?utm_source=ig_web_button_share_sheet

ಈ ಪ್ರಶಸ್ತಿಯನ್ನು ದೇಶದ ಎಲ್ಲಾ ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳಿಗೆ ಹಾಗೂ ಕನಸು ಕಾಣಲು ಹೆದರದೆ ಹೋರಾಡುವ ಪ್ರತಿಯೊಬ್ಬರಿಗೂ ಅರ್ಪಿಸುವುದಾಗಿ ಕಾರ್ತಿಕ್ ಹೇಳಿದ್ದಾರೆ. ಸ್ವಪ್ರಯತ್ನ ಮತ್ತು ಶ್ರದ್ಧೆಗೆ ಎಂದಿಗೂ ಜಯ ಸಿಗುತ್ತದೆ ಎಂಬುದಕ್ಕೆ ಕಾರ್ತಿಕ್ ಆರ್ಯನ್ ಅವರ ಈ ರಾಷ್ಟ್ರಪ್ರಶಸ್ತಿಯೇ ಸಾಕ್ಷಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !