ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಶಿವರಾಜ್‌ಕುಮಾರ್ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಅವರ ಆರೋಗ್ಯದ ಕುರಿತು ಪುತ್ರಿ ನಿವೇದಿತಾ ಕೂಡ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಪೋಸ್ಟ್‌ವೊಂದನ್ನು ಶೇರ್ ಮಾಡಿ, ದೇವರ ಕೃಪೆಯಿಂದ ನನ್ನ ತಂದೆಯ ಸರ್ಜರಿ ಯಶಸ್ವಿಯಾಗಿ ಸಂಪೂರ್ಣಗೊಂಡಿದೆ. ಈಗ ಅವರ ಆರೋಗ್ಯ ಸ್ಥಿರವಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣರಾಗಿರುವ, ಮಿಯಾಮಿ ಹೆಲ್ತ್ ಕೇರ್‌ನಲ್ಲಿ ಅಸಾಧಾರಣ ಸೇವೆ ಒದಗಿಸಿದ ವೈದ್ಯಕೀಯ ತಂಡ ಮತ್ತು ಡಾ. ಮುರುಗೇಶ್ ಮನೋಹರನ್ ಅವರ ಅಚಲ ಬೆಂಬಲ ಮತ್ತು ಕಾಳಜಿಗೆ ನಮ್ಮ ಹೃತ್ತೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.
ಈ ಪ್ರಯಾಣದಲ್ಲಿ ನನ್ನ ತಂದೆ ತೋರಿದ ಧೈರ್ಯ ಮತ್ತು ಶಕ್ತಿಗೆ ಅವರೇ ಸಾಟಿ. ಈ ಸವಾಲುಗಳನ್ನು ಎದುರಿಸುವಲ್ಲಿ ಅವರು ತೋರಿದ ಮನೋಬಲ ನಮಗೂ ಆಶಾಭಾವ ಮೂಡಿಸಿ ನಮ್ಮೆಲ್ಲರಿಗೂ ಧೈರ್ಯ ಒದಗಿಸಿದೆ. ಇದರ ನಡುವೆ, ಎಲ್ಲಾ ಅಭಿಮಾನಿ ದೇವರುಗಳಿಗೂ, ಕುಟುಂಬ ಸದಸ್ಯರಿಗೂ, ಸ್ನೇಹಿತರಿಗೂ ಮತ್ತು ಮಾಧ್ಯಮದ ಸದಸ್ಯರಿಗೂ ನಾವು ನಮ್ಮ ತುಂಬು ಹೃದಯದ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇವೆ. ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆ ಮತ್ತು ಆಶೀರ್ವಾದ ನಮ್ಮ ಶಕ್ತಿಯ ಮೂಲವಾಗಿವೆ. ನೀವೆಲ್ಲರೂ ತೋರಿದ ಕಾಳಜಿ ನಮಗೆ ಮುನ್ನಡೆಯುವ ಬಲ ತುಂಬಿದ್ದು, ಅದಕ್ಕೆ ನಾವೆಂದೆಂದಿಗೂ ಅಭಾರಿಯಾಗಿರುತ್ತೇವೆ. ತಂದೆಯ ಚೇತರಿಕೆಯ ಕುರಿತು ಬರುವ ದಿನಗಳಲ್ಲಿ ತಿಳಿಸುತ್ತೇವೆ. ಈ ಪಯಣದಲ್ಲಿ ನಾವು ಮುಂದಿನ ಹೆಜ್ಜೆ ಇಡುತ್ತಿರಲು, ನಿಮ್ಮ ಪ್ರಾರ್ಥನೆಯ ಮೂಲಕ ನಮ್ಮನ್ನು ಆಶೀರ್ವದಿಸಿ ಎಂದು ಕೇಳಿಕೊಳ್ಳುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಇನ್ನೂ ಶಿವಣ್ಣ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ವೈದ್ಯ ಡಾ.ಮುರುಗೇಶ್ ಮನೋಹರನ್ ಕೂಡ ತಿಳಿಸಿದ್ದಾರೆ.